Click here to Download MyLang App

ಕನಸಿನ ದನಿ (ಇಬುಕ್)

ಕನಸಿನ ದನಿ (ಇಬುಕ್)

e-book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 20.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

‘ಕನಸಿನ ದನಿ' ಸಂಕಲನದಲ್ಲಿ ಒಟ್ಟು ನಲವತ್ತಾರು ಕವಿತೆಗಳಿವೆ. ಕೆಲವು ಮೊದಲ ಓದಿಗೆ ತೆರೆದುಕೊಂಡರೆ, ಮತ್ತೆ ಕೆಲವು ಓದುಗರನ್ನು ದಂಗುಬಡಿಸುತ್ತವೆ. ಹಲವು ಅರ್ಥದ ನೆಲೆಗಳು ಗೋಚರಿಸುತ್ತವೆ. ಸಾಮಾನ್ಯ ಓದುಗರಿಗೆ ಸವಾಲಾಗುತ್ತವೆ. ಸಂಕಲನದ ಮೊದಲ ಕವಿತೆ ‘ತಿಮಿರ' –ಅಜ್ಜಿಯೊಬ್ಬಳ ಕಥೆಯಿಂದ ಮೂಡುವ ಭಯ ಸ್ಥಾಯಿಭಾವವಾಗುತ್ತದೆ ಹಾಗೂ ಕವಿತೆಗೆ ರಾಜಕೀಯ ಆಯಾಮ ಒದಗಿಬಂದು ವಿಭಿನ್ನ ಅರ್ಥಗಳ ನೆಲೆಗಳು ಹುಟ್ಟಿಕೊಳ್ಳುತ್ತವೆ. ‘ಹಗ್ಗ ಹಾವಾಗಿ ಹತನಾಗುವ ಉಪಮೆ, ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ’ಎನ್ನುವಲ್ಲಿ ಕವಿಯ ವೈಚಾರಿಕ ನಿಲುವು ತೆರೆದುಕೊಳ್ಳುತ್ತದೆ. ಕನಸಿನ ಕನವರಿಕೆಯೊ.... ನೋಟದ ಭ್ರಮೆಯೊ ಅನ್ನಿಸುವ ಚಿತ್ರಗಳು ’ಕನಸಿನ ದನಿ'ಯಲ್ಲಿವೆ. ಹಲವು ಸಲ ಬದುಕಲ್ಲಿ ಅರ್ಥ ಹುಡುಕುವುದೇ ವ್ಯರ್ಥ ಎನ್ನುವ ಅನುಭಾವಿಗಳ ಮಾತಿನ ರೂಪಕದಂತಿವೆ ಇಲ್ಲಿನ ಕೆಲವು ರಚನೆಗಳು. ಸಹಜ ಬದುಕು ಮತ್ತು ಯಾಂತ್ರಿಕ ಬದುಕಿನೊಳಗೆ ಹುಲಿಯ ಪ್ರವೇಶವಾಗುತ್ತದೆ. ಬದುಕಿನ ಸಹಜತೆ ತೊಲಗಿ ಕ್ರೌರ್ಯ ಪ್ರವೇಶ ಪಡೆಯುತ್ತದೆ. ಕನಸಿನೊಳಗಿನ ಬದುಕಲ್ಲ, ಬದುಕೇ ಒಂದು ಕನಸಾಗಿ ಬಿಡುವ ವೈಚಿತ್ರ್ಯವನ್ನು ’ಕನಸಿನ ದನಿ' ಕವಿತೆ ಧ್ವನಿಸುತ್ತದೆ. ಅಜಿತ್‌ ಹರೀಶಿ ಅವರ ಇಲ್ಲಿನ ಕವಿತೆಗಳು ಆದರ್ಶಗಳಿಂದ, ಹುಟ್ಟುವ ಆಕ್ರೋಶಗಳಿಗೆ ಬಲಿಯಾಗದೆ. ಆದರ್ಶಗಳನ್ನು ಬದುಕಿನ ಯಥಾರ್ಥಕತೆ ಯಲ್ಲಿ ಶೋಧಿಸುವ. ಕವಿದೃಷ್ಠಿಯ ಬೆಳಕಿನಲ್ಲಿಸಾಗುತ್ತವೆ. ಈ ಶೋಧದ ಪ್ರಕ್ರಿಯೆಯು ಕಾವ್ಯ ಪರಂಪರೆಯ ಮುಖ್ಯವಾಗಿ ಆಧುನಿಕ ಕಾವ್ಯ ಪರಂಪರೆಯ ಅರಿವನ್ನುಹೊಂದಿದ್ದೂ ಸ್ಥಾಪಿತ ಸಿದ್ಧಾಂತಗಳಿಗೆ ಶರಣಾಗದೆ ಕಿರಿದಾದ, ಆದರೆ ಸಶಕ್ತವಾದ ಹೊಸ ಜಾಡನ್ನು ಅನ್ವೇಷಿಸುತ್ತವೆ. ಆದ್ದರಿಂದಲೇ ಪರ-ವಿರೋಧಗಳು ವ್ಯಕ್ತಿ ಮತ್ತು. ಗುಂಪಿನಲ್ಲಿ ಕಾಣಿಸದೆ, ವಸ್ತುವಿನಲ್ಲಿ ಕಾಣಿಸುತ್ತದೆ. 'ಒಂದು ಸನ್ನಿವೇಶದಲ್ಲಿ ಶೋಷಕನಾಗುವವನೇ, ಮತ್ತೊಂದು ಸನ್ನಿವೇಶದಲ್ಲಿ ಶೋಷಿತನೂ ಆಗುವ ಯಥಾರ್ಥತೆಯನ್ನು ಗುರುತಿಸುವ ತಾತ್ವಿಕತೆ ಇಲ್ಲಿನ. ಕವಿತೆಗಳಲ್ಲಿ ಕಂಡು ಬರುವ ಕಾವ್ಯ ಶಕ್ತಿಯೂ, ಕಾವ್ಯ ಸೌಂದರ್ಯವೂ ಆಗಿದೆ. ಅಜಿತ್‌ ಅವರ ಭಾಷಾ ಪ್ರಯೋಗ ಸ್ವಂತದ್ದೇ ಆಗಿದ್ದು, ಕಾವ್ಯ ವಸ್ತುವನ್ನು ಸ್ವತಂತ್ರ ಕಾವ್ಯ ಸ್ವರೂಪದಲ್ಲಿ ಕಡೆದು ನಿಲ್ಲಿಸುತ್ತದೆ.ಭಾಷಾ ಪ್ರಯೋಗದ ಈ ಆನನ್ಯತೆಯು ವಸ್ತುವನ್ನು ದೃಶ್ಯೀಕರಣಕ್ಕೆ. ಒಳಪಡಿಸಿಯೂ, ದೃಶ್ಯೀಕರಣದ ಮಿತಿಯ ಸಮಸ್ಯೆಗಳ ಜಾಡಿನಿಂದ ಆಚೆಗೆ ಒಯ್ಯಲು ಸಮರ್ಥವಾಗಿವೆ. ಆದ್ದರಿಂದಲೇ ಇದು ಹೊಸ ಹೆಜ್ಜೆಯ ಜಾಡು. ಅಜಿತ್‌ ಅವರ ಈ ಹಾದಿ ಬಲಯುತವಾಗಿ ಕನ್ನಡ ಕಾವ್ಯ ಭೂಮಿಕೆ ಮತ್ತೊಂದು ಸಾಧ್ಯತೆಯನ ಕ೦ಡುಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ. - ಅರವಿಂದ ಚೊಕ್ಕಾಡಿ ಕನಸಿನ ದನಿ, ಡಾ|| ಅಜಿತ್ ಹರೀಶಿ,Kanasina Dani, Ajit Harishi

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
C
Customer
"ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆ; ಕುರುಡನ ಜೀವನ ಹೇಗೆ?"

ನಿಮ್ಮ ಕವಿತೆಗಳು ಇಷ್ಟವಾದವು. ಕೊಳದಲ್ಲಿ ಏಳುವ ಅಲೆಗಳಂತೆ ಒಂದೇ ಧ್ಯಾನಸ್ಥಸ್ಥಿತಿಯಲ್ಲಿ ಬೇರೆಬೇರೆ ವಸ್ತುಗಳನ್ನು ಮುಟ್ಟುವ ಕವಿತೆಗಳಿವು. ಸರಳಪದಗಳು ಹುಟ್ಟಿಸುವ ಅರ್ಥಗಾಂಭೀರ್ಯಕ್ಕೆ ಮತ್ತು ತರ್ಕಕ್ಕೆ ಬೆರಗಾಗಿದ್ದೇನೆ.

"ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆ;
ಕುರುಡನ ಜೀವನ ಹೇಗೆ?"

ಎನ್ನುವಂತಹ ಸಾಲುಗಳು ನನ್ನನ್ನು ಹಿಡಿದು ನಿಲ್ಲಿಸಿದವು.

"ಅರ್ಧ ಗೀಚಿದ ಕವಿತೆ; ಅಂತ್ಯ ಕಾಣದ ಕತೆ; ಮಧ್ಯೆ ನಿಂತ ಬದುಕಿನಂತೆ; ಮುಂದೇನೆಂಬ ಚಿಂತೆ"

ಎಷ್ಟು ಚೆನ್ನಾಗಿ ಕವಿತೆಗೂ ಬದುಕಿಗೂ ಕೊಂಡಿ ಹಾಕಿದ್ದೀರ. ಪ್ರಾಚೀನವನ್ನು ಮತ್ತು ಆಧುನಿಕವನ್ನು ನೀವು ಥಳುಕು ಹಾಕಲು ಮಾಡಿಕೊಂಡ ವಿಶೇಷ ಭಾಷಾ ಪ್ರಯೋಗಗಳು ನನ್ನನ್ನು ಸೆಳೆದವು.

"ಪಂಚಗವ್ಯ ಸೇವಿಸಿ
ಕಳೆದುಕೊಳ್ಳುತ್ತಿದ್ದರೂ ಸೂತಕ
ಸಾವಿನ ನೋವಿಂದು ಸ್ಕ್ರೋಲಾಗುವುದು
ಫೇಸ್ಬುಕ್ ಪುಟದಂತೆ"

ಎಷ್ಟೊಂದು ಬಗೆಯ ವಸ್ತುಗಳನ್ನು ಆರಿಸಿಕೊಂಡಿದ್ದೀರ! ಎಷ್ಟೊಂದು ವಿಶೇಷವಾಗಿ ಹೇಳಲು ನೋಡುತ್ತಿದ್ದೀರ. ಈ ಓದು ನನಗೆ ಖುಷಿಕೊಟ್ಟಿತು. ಹೀಗೆಯೇ ಬರೆಯುತ್ತಿರಿ.
*
- ಎಂ. ಆರ್ ದತ್ತಾತ್ರಿ
ಕಾದಂಬರಿಕಾರರು.

ಕಾವ್ಯಾ ಹೆಗಡೆ
ಮನಸಿನ ದನಿಯೂ ಆಗಬಲ್ಲ 'ಕನಸಿನ ದನಿ'.

ಮನಸಿನ ದನಿಯೂ ಆಗಬಲ್ಲ 'ಕನಸಿನ ದನಿ'

ಡಾ. ಅಜಿತ್ ಹರೀಶಿ ಅವರ ಈ ಕವನಗಳು ಮನಸ್ಸಿನಲ್ಲಿ ನೆಲೆ ನಿಲ್ಲುವಂತವು. ಬದುಕಿನ ಹಲವು ಸಂಗತಿಗಳನ್ನು ಹೊಸ ಆಯಾಮಗಳಲ್ಲಿ ತೋರಿಸುವ ಕನ್ನಡಿಯಂತಿರುವ ಈ ಕವನಗಳು ಗಂಭೀರ ವಿಷಯಗಳನ್ನು ಸರಳವಾಗಿ ಹೇಳುತ್ತವೆ. 'ತಿಮಿರ' ಅರಿವಿನ ಹಣತೆ ಹಚ್ಚುವ ಕವನವಾದರೆ, 'ರಜೆಯ ಮೇಲಿದ್ದೇನೆ' ಕವನ ಕವಿ ಎಷ್ಟು ಸೂಕ್ಷ್ಮರು ಎಂಬುದನ್ನು ತಿಳಿಸುತ್ತದೆ. ಅಪರೂಪದ ವಸ್ತುವುಳ್ಳ 'ಪಕ್ಕದಮನೆ', 'ಇಲಿ, ಬೋನು ಮತ್ತು ಸಾಬೂನು' ಅಜಿತ್ ಹೆಗ್ಡೆಯವರ ಪ್ರತಿಭೆಗೆ ಸಾಕ್ಷಿಯಾಗುವಂತ ಕವನಗಳು. 'ತನ್ನ ಬಿಟ್ಟು..', 'ಊನ', 'ಮಾ ಫಲೇಶು ಕದಾಚನ'ದಂತಹ ಕವನಗಳು ತಣ್ಣನೆಯ ವಿಡಂಬನೆಯನ್ನು ಹೊತ್ತು, ನಮ್ಮನ್ನು ಅವಲೋಕನಕ್ಕೆ ನೂಕುತ್ತವೆ. ಶೀರ್ಷಿಕೆ ಕವನ 'ಕನಸಿನ ದನಿ'ಯಂತೂ ಯಾಂತ್ರಿಕ ಬದುಕಿನಲ್ಲಿ ಕನಸು ಮತ್ತು ವಾಸ್ತವದ ನಡುವೆ ತುಯ್ದಾಡುತ್ತ ಸುಖದ ಸಾಕ್ಷಾತ್ಕಾರದ ಭ್ರಮೆಯೊಟ್ಟಿಗೇ ಇನ್ನೇನನ್ನೋ ಕನವರಿಸುವ ಕವನ. ಬಹಳ ಕಡಿಮೆ ಪದಗಳಲ್ಲಿ 'ಖೋ..' ಕವನದಲ್ಲಿ, ಪ್ರೇಮ ಜಗದಗಲಕ್ಕೂ ಹಬ್ಬಲಿ ಎಂಬ ಅಮೃತತತ್ವವನ್ನು ಬಿತ್ತಿದ ಅಜಿತರಿಗೆ ಶರಣು. ಮನಸ್ಸಿನಲ್ಲಿ ಉಳಿಯುವ ಸಾಲುಗಳು ಸಂಕಲನದಲ್ಲಿ ಬಹಳಷ್ಟಿವೆ. ಅತ್ಯುತ್ತಮ ಆಶಯ, ಕನಸುಗಳನ್ನು ಹೊತ್ತ ಲೇಖಕರ ಮನಸಿನ ದನಿಯಾಗಿದೆ ಈ ಪುಸ್ತಕ. ಒಟ್ಟಾರೆ ಇಲ್ಲಿನ ಕವನಗಳು ಓದುಗರನ್ನು ಹಿಡಿದಿಟ್ಟು, ಒಂದು ಬಗೆಯ ಅಚ್ಚರಿ, ರೋಮಾಂಚವನ್ನು ಮೂಡಿಸಲು ಶಕ್ತವಾಗಿವೆ.