Click here to Download MyLang App

ಘಟನಾವಳಿ : ಹೇಮಂತ್ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

 

ಅಲ್ಯೂಮಿಜಾರಿ ನದಿಯ ಪಕ್ಕದ ಕಾಡು ಕೊರಕಲು ಜಾಗದಲ್ಲಿದ್ದ ರಾಸಾಯನಿಕ ನಿರ್ಮಿಸುವ ಕಾರ್ಖಾನೆಯಿಂದ,ಕೆಲಸ ಮುಗಿದ ಕಡುಗತ್ತಲಲ್ಲೂ ಚಿಮಣಿ ಪ್ರಕೃತಿಯನ್ನು ಗುಂಡಿನಿಂದ ಸುಟ್ಟ ಬಂದೂಕು ನಳಿಕೆಯಂತೆ ಸಣ್ಣ ಹೊಗೆಯನ್ನು ಸೂಸುತ್ತಲಿತ್ತು. ಫ್ಯಾಕ್ಟರಿಯ ಪಹರೆ ಕಾಯುವ ಅಂಥೋಣಿ ಚಳಿಯ ತೀವ್ರತೆಗೆ ಒಳಗೊಳಗೆ ಕುಕ್ಕುತ್ತಿದ್ದ ಒಡಲೊಳಗಿನ ಜಲವನ್ನು ಹೊರಹಾಕಲು ನದಿತಟದ ಪೊದೆಗೆ ಸರಿದ. ಅಲ್ಯೂಮಿಜಾರಿಯ ಸೇತುವೆಯ ಇನ್ನೊಂದು ಬದಿಯ ಬೀದಿದೀಪದ ಬುರುಡೆ ಗೋಚರವಾಗುತ್ತಿತ್ತು. ಕತ್ತಲೆಗೆ ಹೊಂದಿಕೊಂಡಿದ್ದ ಅವನ ಕಣ್ಣುಗಳಿಗೆ ದೂರದ ಚಿಕ್ಕ ಬೆಳಕೂ ಅಸಹನೀಯವಾಗಿ, ಮತ್ತೆ ಖಾಲಿ ಕತ್ತಲೆಯ ಲೋಕಕ್ಕೆ ಬಂದ

ಅರ್ಧ ಬತ್ತಿದ ನದಿಯ ಮರಳು ತೆಗೆಯಲು ಲಾರಿಯೊಂದಿಗೆ ಬಂದ ಇಬ್ಬರು ಅಪರಿಚಿತರು. ಗಾಡಿಯ ದೀಪ ಆರಿಸಿದರು.ಮೇಲಿರುವ ಕಾಲುವೆಗೆ ತಾಕಿ, ಉಳಿದ ಬೆಳಕು ಕೆಳಗೆ ಹರಿಯುತ್ತಿದ್ದ ಜಾಗವದು . ಮರಳು ತೆಗೆಯಲು ಸುಲಭ, ತೆಗೆದದ್ದು ತಿಳಿಯುವುದಿಲ್ಲ ನದಿಯಲ್ಲಿನ್ನೂ ಅರ್ಧ ನೀರಿದೆ.ಆ ಮಂದ ಬೆಳಕು ಕತ್ತಲಿನ ಕಣ್ಣಿಗೆ ಸಾಕು, ಕಿಡಿ ಹುಡುಕುವ ಕಂಗಳಿಗೆ ಏನೂ ಕಾಣದು. ಸಣ್ಣಗೆ ಹರಿಯುವ ನದಿ ಕರಾಳ ಮೌನದಲ್ಲಿ ಭೋರ್ಗರೆದು ಹರಿವ ಸದ್ದು.ಹಸಿ ಮರಳಿನ ಭಾರವನ್ನು ಲೆಕ್ಕಿಸದೆ ತುಂಬಿಸುತ್ತಿದ್ದವು ಆ ಆಕೃತಿಗಳು.

ಸೈಕಲಿನ ಪೆಡಲುಗಳ ತುಳಿ ತುಳಿದು ಬರುತ್ತಿದ್ದ ವೃದ್ಧ ಅಲ್ಯೂಮಿಜಾರಿಯ ಸೇತುವೆಯ ಮೇಲೆ ಹೋಗುತ್ತಿದ್ದ,ಡೈನಮೋದ ಬೆಳಕನ್ನು ಮೀರಿಸುವ ಬೀದಿದೀಪದ ಬೆಳಕು ದಾರಿಯನ್ನು ದೃಗ್ಗೋಚರ ಗೊಳಿಸಿತ್ತು. ಸೈಕಲ್ಲಿನ ಸೀಟು ಹತ್ತಿ ಹೊತ್ತು ಸುಮಾರು ಕಳೆದಿತ್ತು ಆದರೆ ಅಲ್ಯೂಮಿಜಾರಿಯ ಅತ್ತ ಕಡೆ ತಲುಪಬೇಕಿತ್ತು, ಆದಷ್ಟು ಬೇಗ ಮುಟ್ಟಬೇಕಿತ್ತು ಆ ಕಾರ್ಗತ್ತಲನ್ನು.

ಸಂತ ಜೋಸೆಫ್ ಆಸ್ಪತ್ರೆಯ ಹಸಿರು ಹಾಸಿಗೆಯ ಮೇಲೆ ಗರ್ಭವತಿ ಟೆಸ್ಸಾಳ ಆರ್ತನಾದ ಮುಗಿಲು ಮುಟ್ಟಿತ್ತು. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಹೆರಿಗೆ ನೋವು ಅವಳ ದೇಹದ ಇಂಚಿಂಚಿನ ಪ್ರಾಣವನ್ನೂ ಹಿಂಡುತ್ತಿತ್ತು. ಆ ನಡು ರಾತ್ರಿಯಲ್ಲಿ ತನ್ನ ಗಂಡನಿಲ್ಲದೆ ಒಬ್ಬಂಟಿ ಹೆಂಗಸು ಜಗದ ನೋವನ್ನೆಲ್ಲ ಹೇಗೆ ಸಹಿಸಿಯಾಳು?. ಪರೀಕ್ಷಿಸಿದ ಡಾಕ್ಟರ್ ಕೂಡ ಶಸ್ತ್ರಚಿಕಿತ್ಸೆ ಮಾಡಲೇಬೇಕು, ಸಹಜ ಪ್ರಸೂತಿ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು.

ಅಲ್ಯೂಮಿಜಾರಿಯ ಮರಳ ಕಣಿವೆಯಿಂದ ಒಂದೇ ಸಮನೆ ಮೇಲೆ ಹತ್ತಿದ ಮರಳ ಲಾರಿ ಇಬ್ಬರು ಹತ್ತಿದ್ದ ಸೈಕಲ್ಲಿನ ಮೇಲೆ ನುಗ್ಗಿತು ಅದೃಷ್ಟವಶಾತ್ ಜೀವಾಪಾಯ ಇರಲಿಲ್ಲ, ಆದರೂ ಚಿಕ್ಕ ಪುಟ್ಟ ಗಾಯಗಳಾಗಿದ್ದವು. ತಮ್ಮ ಮರಳ ದಂಧೆಯ ಮೇಲೆ ಕೆಟ್ಟಗಣ್ಣು ಬೀಳದಿರಲಿ ಎಂದು ಅವರೇ ಊರಿನ ಒಂಟಿ ಹಾಸ್ಪಿಟಲಿಗೆ ಸೇರಿಸಿ ಬಂದರು

ವೃದ್ಧ ಆ ಸೇತುವೆಯನ್ನು ದಾಟಿ ಸೀದಾ ಫ್ಯಾಕ್ಟರಿಯ ಮುಂದೆ ನಿಂತಿದ್ದ ಅಂಥೋಣಿಯ ಕಾಲಿಗೆ ತಾಕಿಸಿದ. ಸೈಕಲ್ಲಿನ ಬ್ರೇಕು ವೃದ್ಧ ಯೋಜಿಸಿದ ಪರಿಣಾಮ ಬೀರಲಿಲ್ಲ. ಆದರೆ ಗಕ್ಕನೆ ನಿಂತುಬಿಟ್ಟಿತ್ತು.

 

"ಏಯ್ ಮುದುಕ ಈಗ ಹೊತ್ತಲ್ಲಿ, ಇಲ್ಲಿಗ್ಯಾಕೋ ಬಂದೆ "

 

"ನಿನ್ನ ಮಗು…  "

 

"............................"ಗೇಟಿನ ಬೀಗ ಭದ್ರಪಡಿಸಿ ಅಂಥೋಣಿ ತಾನೆ ಸೈಕಲ್ಲು ತುಳಿಯಲು ಅಣಿಯಾದ ವೃದ್ಧ ಹಿಂದಿನ ಕಬ್ಬಿಣದ ಅಡ್ಡೆಯ ಮೇಲೆ ಕುಳಿತ.

 

ಸೈಕಲ್ಲು ಅಲ್ಯೂಮಿಜಾರಿಯ ಇನ್ನೊಂದು ತುದಿ ತಲುಪಲಿತ್ತು.

ಇತ್ತ ಟೆಸ್ಸಾಳ ಕಂದನ ಮೊದಲ ಉಸಿರು ಅಳುವಿನ ಮೂಲಕ ಹೊರಳುತ್ತಿರುವಾಗಲೇ, ಕೈಗಾದ ಗಾಯದ ಇರುವು ಮರೆತು ಅಂಥೋಣಿ ಸಂತಸಗೊಂಡಿದ್ದ.ಹೆಣ್ಣು ಹೆತ್ತ ಸಂಭ್ರಮ ಟೆಸ್ಸಾಳ ಮೂರ್ಛೆಯ ಮನದಲ್ಲೂ ಕುಣಿದಾಡುತ್ತಿತ್ತು.

 

ಅತ್ತ ಕಡೆಯುಸಿರೆಳೆದು ಕೊನೆಯ ಕಿರುನಗುವನ್ನು ಬೀರದೆ ಪರಲೋಕಕ್ಕೆ ಹೊರಟ ಪತ್ನಿಯನ್ನು ಕಂಡು ವೃದ್ಧ ಬಿಕ್ಕಿ ಬಿಕ್ಕಿ ಅಳುತ್ತಿದ್ದ.

 

ಅಂಥೋಣಿ ತನ್ನ ಮಗುವಿನ ಹುಟ್ಟನ್ನು ಸಂಭ್ರಮಿಸಬೇಕೋ, ಅಥವಾ ವೃದ್ಧನು ತನ್ನ ಪತ್ನಿಯ ಸಾವನ್ನೂ ಬದಿಗಿಟ್ಟು ನನ್ನನ್ನು ಕರೆತಂದ ವೃದ್ಧನ ಕಂಬನಿಗೆ ಮರುಗಬೇಕೋ ತಿಳಿಯಲಿಲ್ಲ.

 

ಬೆಳಕು ಹರಿದ ಮೇಲೆ ಖುಷಿ ದುಃಖಗಳ ಟೆಲಿಗ್ರಾಮು ಕಳಿಸುವ ದ್ವಂದ್ವ ಸಂಕಷ್ಟ ಅಂಥೋಣಿಯದು. ವಿಳಾಸ ಅದಲು ಬದಲಾಗದಂತೆ ಎಚ್ಚರ ವಹಿಸಿದ್ದ.

 

******

 

ವೃದ್ಧ ಯಾರೋ, ಅವನ ಪತ್ನಿ ಯಾರೋ ಅಂಥೋಣಿಗೆ ತಿಳಿದಿಲ್ಲ, ಆದರೆ ಒಂದು ಹೆಣ ಹೊರಲೂ ಕೂಡ ಅವರ ಕಡೆಯವರು ಯಾರೂ ಇಲ್ಲ ಎಂಬುದು ತಿಳಿದಿತ್ತು. ತನ್ನ ಧಣಿಗಳ ಮನೆಗೆ ತೆರಳಿ ಫ್ಯಾಕ್ಟರಿಯ ಬೀಗ ಕೊಟ್ಟು ವಿಷಯವನ್ನು ಅರುಹಿದ. ಧಣಿಗಳು ಗಾಡಿಯ ವ್ಯವಸ್ಥೆ ಮಾಡುವುದಾಗಿ ಹೇಳಿದರು

 

ವೃದ್ಧನ ಪತ್ನಿಯ ಶವ ಅಲ್ಯೂಮಿಜಾರಿಯ ಸೇತುವೆ ಮೇಲೆ ಶಾಂತವಾಗಿ ಸಾಗುತ್ತಿತ್ತು. ಕುದುರೆಯ ಸಾರೋಟು ಓಡಿಸುತ್ತಿದ್ದವನನ್ನು ಕೇಳಿದ ಅಂಥೋಣಿ

 

"ನೆನ್ನೆ ರಾತ್ರಿ ಲಾರಿಯಲ್ಲಿ ಗುದ್ದಿದ್ದು ನಿಮ್ಮ ತಪ್ಪಲ್ಲ, ನಮ್ಮದೇ ಸೈಕಲ್ ಬೇಕೆಂದಾಗ ನಿಲ್ಲಲಿಲ್ಲ. ನೀವು ಆಸ್ಪತ್ರೆಗೆ ಕರೆದೊಯ್ದದ್ದು ಒಳ್ಳೆಯದಾಯಿತು. ಧನ್ಯವಾದಗಳು.

ಅದು ಸರಿ, ಆ ರಾತ್ರಿ ಏನೂ ಕೆಲಸ "

 

" ಅದು ಬಾಡಿಗೆಗೆ " ತಡವರಿಸುತ್ತ.

 

"............." ಅಂಥೋಣಿಗೆ ಅಂದಾಜು ಸಿಕ್ಕಿತ್ತು

"ಮರಳಿಗೆ ಒಳ್ಳೆಯ ಬೆಲೆಯೇನೋ? " ಕೇಳಿದ.

 

"ಮರಳಿಗೆ ಬೆಲೆ ಯಾಕೆ ಅದು ಶಹರಗಳಿಗೆ ಮಾತ್ರ, ಹಳ್ಳಿಗಳಲ್ಲಿ ಮಣ್ಣ ಮನೆ ಮಾಡುತ್ತಾರೆ,ನಮಗೆ ಅಲ್ಯೂಮಿಜಾರಿಯ ಮರಳು ಅಷ್ಟೇ ಬೇಕಾದದ್ದು"

 

ಸ್ಮಶಾನದ ಪಕ್ಕ ಕಟ್ಟಿದ ಕಾರ್ಖಾನೆ, ಊರಲಿಲ್ಲದ ಒಂಟಿ ದೀಪದ ವ್ಯವಸ್ಥೆ, ಲಟಾರಿ ಮಶೀನುಗಳಿಗೆ ತನ್ನ ರೂಪದಲ್ಲಿ ಒಬ್ಬ ಕಾವಾಲುಗಾರ, ಅಲ್ಯೂಮಿಜಾರಿ ಪಕ್ಕದಲ್ಲೇ ಕಾರ್ಖಾನೆ,ಧಣಿಗಳ ಲಾರಿ, ಚಾಲಕ ಮತ್ತು ಅವರ ಅಗಣಿತ ಸಂಪತ್ತು. ವಿಷಯ ಬಹಳ ದೊಡ್ಡದಿತ್ತು ಎಂಬುದು ಅಂಥೋಣಿಗೂ ತಿಳಿದಿತ್ತು. ವೃದ್ಧನ ಕಣ್ಣೀರು, ಟೆಸ್ಸಾಳ ಸಂತೃಪ್ತ ಮುಖಗಳೆರಡು ಒಟ್ಟೊಟ್ಟಿಗೆ ಮೂಡಿ. ತನ್ನಂತಹ ಸಾಮಾನ್ಯ ಮನುಷ್ಯ ತನ್ನ ಸಾಮಾನ್ಯ ಜೀವನವನ್ನು ಬಿಟ್ಟು ಹೊರಬರಲಾರ ಎಂಬುದನ್ನು ಅರಿತು ಸುಮ್ಮನಾದ.

ದೂರದ ಬೀದಿದೀಪ ಹಗಲಾದರೂ ಇನ್ನೂ ಬೆಳಗುತ್ತಿತ್ತು.