Click here to Download MyLang App

ನನ್ನನಗಲಿದ ಕಥಾ ಕವನಗಳು : ಮಹೇಶ್ ಎಸ್ ಎಸ್ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

ಬರೆಯಬೇಕೆಂಬ ಹೆಬ್ಬಯಕೆ ಎಂದು ನನ್ನಲ್ಲಿ ಮೂಡಿತೋ, ಅಂದಿನಿಂದ ಬರವಣಿಗೆಯಲ್ಲೇ ಮಗ್ನಮುಕ್ತನಾಗಿ ಬರೆಯತೊಡಗಿದೆ. ಕೂತಾಗ ಬರೆದೆ, ನಿಂತಾಗ ಓದಿದೆ, ನಡೆವಾಗ ಬರೆದದ್ದನ್ನು ಅವಲೋಕಿಸಿದೆ, ಮಲಗುವಾಗ ನಾಳೆ ಬರಾಯಬೇಕಾದದ್ದನ್ನು ಮನಸಲ್ಲೇ ಟಿಪ್ಪಣಿ ಮಾಡತೊಡಗಿದೇ. ನಿದ್ರೆಯಲ್ಲೂ ಕಥೆ, ಕಾದಂಬರಿ, ಕವನಗಳ ಬಗ್ಗೆ ಕನವರಿಸಿದೆ. ಬರವಣಿಗೆಯ ಹುಚ್ಚು ಹಿಡಿದರೆ ಹೀಗೆ ಹಾಗುವುದಂತೆ. ನಿಂತರೂ, ಕೂತರು, ನಡೆದರೂ, ಮಲಗಿದರೂ, ಕೆಮ್ಮಿದರೂ! ಬರೀ ಬರವಣಿಗೆಯ ಬಗ್ಗೆ ಚಿಂತೆ!.
ಹೀಗೆ ನಿರಂತರವಾಗಿ, ಸತತವಾಗಿ ಒಂದು ವರ್ಷದ ತನಕ ಬರೆದೆ...! ಸಾಹಿತ್ಯದ ಎಲ್ಲ ಪ್ರಕಾರಗಳಾದ ಕಥೆ, ಕಾವ್ಯ, ಕವನ, ಹನಿಗವನ, ಕಾದಂಬರಿ, ಕಿರುಗಥೆ, ಲಲಿತ ಪ್ರಬಂಧಗಳು, ನಗೆಬರಹಗಳು, ನಗೇಹೊನಲುಗಳು, ಚುಟುಕು ಎಲ್ಲವನ್ನು ಗೀಚಿದ್ದೇ ಗೀಚಿದ್ದು! (ಮಾಹಾ ಕಾವ್ಯವೊಂದನ್ನು ಬಿಟ್ಟು).
ಬರಿ ಬರೆದರಷ್ಟೇ ಸಾಕೇ....
ಸಾಹಿತ್ಯವೆಂಬುದು ಒಂದು ಕೃಷಿಯಿದ್ದಂತೆ, ರೈತನು ಹೇಗೆ ತಾನು ಬೇಸಾಯ ಮಾಡಿದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿ ತಕ್ಕ ಪ್ರತಿಫಲವನ್ನು ಪಡೆಯುವನೋ ಹಾಗೆ ಸಾಹಿತಿಯಾದವನ ಕೃತಿಯು ಪ್ರಕಟಿತಗೊಂಡು ಜನರನ್ನು ಮುಟ್ಟಿದರೇನೇ ಒಂದು ಪರಿಪೂರ್ಣತೆಯನ್ನು ಪಡೆದುಕೊಳ್ಳುವುದು.ಆದ್ದರಿಂದ ವರ್ಷದಿಂದ ಗೀಚಿದ ಎಲ್ಲ ಕೃತಿ ಕಾವ್ಯಗಳನ್ನು ಪ್ರಕಾಶಕರೊಬ್ಬರಿಗೆ ಕಳುಹಿಸಿ ಕೊಟ್ಟೆ!.. ಮತ್ತು ಸಧ್ಯದಲ್ಲೇ ನನ್ಮ ಕೃತಿಗಳು ಪುಸ್ತಕರೂಪದಲ್ಲಿ ಅಥವಾ ದಿನಪತ್ರಿಕೆಯಲ್ಲಿ ಹೊರಬರುವುದು ಖಚಿತವೆಂದು ಜಂಬದಿಂದ ಎಲ್ಲರೊಡೆನೇ ಬಹು ಉತ್ಸುಕನಾಗಿ ಹೇಳಿಕೊಂಡೇ ಕೂಡಾ...ದಿನಾ ಪತ್ರಿಕೆಯ ಪುಟಗಳನ್ನು ಎರಡೆರಡು ಭಾರಿ ತಿರುವಿ ಹಾಕಿದ್ದಾಯಿತು, ಎಲ್ಲೂ ನನ್ನ ಕಿರುಗಥೆಯಾಗಲಿ, ಕವನವಾಗಲಿ ಕೊನೇ ಪಕ್ಷ ನನ್ನ ಯೋಗ್ಯತೆಗೆ ಒಂದು ಹನಿಗವನವಾದರು ಪ್ರಕಠಿತಗೊಳ್ಳಬೇಡವೆ?...ಅದೂ ಇಲ್ಲಾ!..
ಕಾದು ಬೇಸರವಾಗಿ, ಬಹುಶಃ ನನ್ನ ಕೃತಿ ಪ್ರಕಾಶಕರಿಗೆ ತೃಪ್ತಿತಂದಿರಲಾರದು ಎಂದೂಹಿಸಿ...ಮತ್ತೇ ಬೇರೆ ಕೃತಿಗಳನ್ನು ಕಳುಹಿಸಲು ತೀರ್ಮಾನಿಸಿದೆ!..

ಈ ಬಾರಿ ನನ್ನ ಬತ್ತಳಿಕೆಯಲ್ಲುಳಿದಿದ್ದ ಕೃತಿಗಳಲ್ಲಿ ನನಗೆ ಉತ್ತಮವೆನಿಸಿದ ಕೆಲವು ಕಥೆ, ಕಾದಂಬರಿ, ಕವನ ಕಾವ್ಯಗಳನ್ನು ದೊಡ್ಡದೊಂದು ಕಟ್ಟುಜೋಡಿಸಿ ಮತ್ತೇ ಕಳುಹಿಸಿಕೊಟ್ಟೆ, ಜೊತೆಗೆ ಈ ಕೆಳಕಂಡಂತೆ ಒಂದು ಕೋರಿಕೆ ಪತ್ರವನ್ನು ಬರೆದೇ!..

ಮಾನ್ಯ ಪ್ರಕಾಶಕರೇ!..
ಈ ಹಿಂದೇ ನಾನು ನಿಮ್ಮ ಪ್ರಕಾಶನಕ್ಕೆ ನನ್ನ ಕೃತಿಗಳನ್ನು ಕಳುಹಿಸಿ ಕೊಟ್ಟಿದ್ದೇ, ಮತ್ತೂ ಅವು ಬಹುಬೇಗನೆ ಪ್ರಕಟಣೆ ಭಾಗ್ಯವನ್ನು ಕಾಣುವುವು ಎಂದು ಬಹುವಾಗಿ ಆಶಿಸಿ ಕಾದೇ. ತಿಂಗಳಾದರೂ ನಿಮ್ಮ ವಾರ ಪತ್ರಿಕೆ, ಮಾಷಪತ್ರಿಕೆಗಳಲ್ಲಿ ನನ್ನ ಕೃತಿಗಳಾವುವು ಪತ್ರಕಟಿತವಾದಂತೆ ಕಾಣಲಿಲ್ಲ. ಈ ಮುಂಚೆ ಕಳಿಸಿರುವ ಕೃತಿಗಳು ತಮಗೆ ತೃಪ್ತಿಯನ್ನು ತಂದಿರಲಾರದು. ಆದ್ದರಿಂದ ಅವನ್ನು ಇತರರೊಂದಿಗೆ ಅವಲೋಕಿಸಿ ಪ್ರಕಟಿಸಬೇಡವೆಂದು ತೀರ್ಮಾನಿಸಿದ್ದೀರೇನೋ?. ಇರಲಿ ಚಿಂತೆಯಿಲ್ಲ. ಈ ಬಾರಿ ನಾನು ಬರೆದ ಕೃತಿಗಳಲ್ಲಿ ಶ್ರೇಷ್ಟವೆನಿಸದ ಕೆಲವನ್ನು ನಾನೇ ವಿಮರ್ಶಿಸಿ, ಅವಲೋಕಿಸಿ ತಿದ್ದು ತೀಡಿ, ಕವನ ಬೇರೆ, ದೀರ್ಘ ಪ್ರಬಂದ ಬೇರೆ, ಗದ್ಯ ಬೇರೆ, ಪದ್ಯ ಬೇರೆ, ಕಾದಂಬರಿ ಬೇರೆ, ಹೀಗೆ ಅನೇಕ ಪಂಗಡಗಳನ್ನಾಗಿ ವಿಭಜಿಸಿ ಕಟ್ಟುಜೋಡಿಸಿ, ಅಂಚೆ ಖರ್ಚಿಗೆ ಸಾಲ ಪಡೆದು (ನೀವು ಕೊಡುವ ದೇಣಗೆಯಿಂದ ಸಾಲ ತೀರಿಸುವೆನೆಂದು ನಂಬಿ!) ಕಳಿಸಿರುವೆನು. ದಯಮಾಡಿ ಈ ಬಡ ಬರಹಗಾರನಲ್ಲಿ ಕರುಣೆ ಇಟ್ಟು ಈ ಬಾರಿಯಾದರು ನನ್ನ ಕೃತಿಕಗಳನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸುವಿರಾ..
ಇತಿ ನಿಮ್ಮ ನಂಬುಗೆಯ
...............................
(ಈ ಬಾರಿಯಾದರೂ ಕತ್ತಲಲ್ಲಿರುವ ನನ್ನ ಕೃತಿಗಳನ್ನು ಬೆಳಕಿಗೆ ತರುವಿರಿ ಎಂಬ ಮಹದಾಸೆಯಿಂದ)........

ಪುನಃ ಒಂದು ತಿಂಗಳಾದರು ಪ್ರಕಾಶಕ ಮಹಾಶಯರಿಂದ ಯಾವ ಉತ್ತರವೂ ಬರಲಿಲ್ಲಾ!?!..
ದಿನಾ ನಾನು ಬರಹವನ್ನು ಕಳುಯಿಸಿ ಕೊಟ್ಟ ಪ್ರಕಾಶಕರ ದಿನ ಪತ್ರಿಕೆಗಳನ್ನು, ಮಾಸ ಪತ್ರಿಕೆಗಳನ್ನು ತರಿಸಿಕೊಂಡು ಅಡಿಯಿಂದ ಮುಡಿಯವರೆಗೆ ಒಂದಕ್ಷರ ಬಿಡದೇ ನೋಡಿದೇ! ಇದರಿಂದ ಅವರ ಪತ್ರಿಕೆಗಳು ನಾನು ವಾಸಿಸುವ ಕೊಂಪೆಗೂ ಬಂದು ಮುಟ್ಟಿ ಅವರಿಗೆ ಲಾಭವಾಯಿತೇ ವಿನಹ, ಎಲ್ಲಿಯೂ ನನ್ನ ಬರಹ ಪ್ರಕಟವಾದಂತೆ ಕಾಣಲಿಲ್ಲ. ಜೊತೆಗೆ ಅತ್ತಿರದಲ್ಲಿರುವ ಅಂಚೆ ಕಛೇರಿಗೆ ಎಡೆಬಿಡದೆ ನಡೆದು ಅಂಚೆಯವನನು ನನ್ನ ಹೆಸರಿನಲ್ಲಿ ಯಾವುದಾದರೂ ಕಾಗದ ಬಂದಿರುವುದೇ ಎಂದು ವಿಚಾರಿಸುತ್ತಿದ್ದೆ. ಮೊದಮೊದಲು ಹಸನ್ಮುಖಿಯಾಗಿ ಇಲ್ಲಾ ಎನ್ನುತ್ತಿದ್ದ ಅಂಚೆಯವನ ಸೌಹಾರ್ದತೆ ಬರುಬರುತ್ತಾ ಕಡಿಮೆಯಾಗ ತೊಡಗಿ ನನ್ನನು ಸ್ವಲ್ಪಸ್ವಲ್ಪವೇ ಕಡೆಗಣಿಸ ತೊಡಗಿದ. ನಾನು ಕಳುಯಿಸಿಕೊಟ್ಟ ಬರಹಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದಿದ್ದುದ್ದನ್ನು ನೋಡಿ ನಿರಾಸೆ, ನಿರುತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಊಟ ನಿದ್ರೆಗಳನ್ನು ಬಿಟ್ಟು ಇದರದ್ದೇ ಚಿಂತೆಯಲ್ಲಿ ಮುಳುಗಿದೇ!.
ಹುಚ್ಚು ಇಡಿಯಿತು, ಏನು ಮಾಡಬೇಕೆಂಬುದು ತೋಚಲಿಲ್ಲ. ಜೂಜಿನ ಆಟದಲ್ಲಿ ತನ್ನೆಲ್ಲಾ ಹಣ ಆಸ್ತಿಯನ್ನು ಕಳೆದುಕೊಂಡು, ಬುದ್ದಿಬರೆದೇ ಮತಿಗೆಟ್ಟು ಮತ್ತೂ ಇದು ಕೊನೆ ಸಾರಿಯ ಆಟ ಎಂದು ತನ್ನಲಿದ್ದೆಲ್ಲವನ್ನು ಪಣಕ್ಕಿಡುವ ಜೂಜಾಟದವನಂತೆ, ಕೊನೇ ಬಾರಿ ನನ್ನಲಿದ್ದ ಎಲ್ಲ ಬರಹಗಳನ್ನು ದೊಡ್ಡದೊಂದು ಕಟ್ಟುಮಾಡಿ ಪ್ರಕಾಶಕರಿಗೆ ಪುನಃ ನನ್ನ ಅದೃಷ್ಟ ಪರೀಕ್ಷೆಗಾಗಿ ಕಳುಯಿಸಿ ಕೊಟ್ಟೆ. ಜೊತೆಗೆ ವಿಷಾದ ವ್ಯಕ್ತ ಪಡಿಸಿ ಒಂದು ಪತ್ರವನ್ನು ಈ ಕೆಳಕಂಡಂತೆ ಬರೆದೇ!.
ಮಾನ್ಯ ಪ್ರಕಾಶಕರೇ,
(ತೀರಾ ಬೇಸರದಿಂದ)
ಈ ಮುಂಚೆ ನಾನು ನಿಮಗೆ ಕಳುಸಿ ಕೊಟ್ಟ ಯಾವ ಲೇಖನವು ಪ್ರಕಟವಾಗಲಿಲ್ಲ. ನನ್ನ ಅದೃಷ್ಟಕ್ಕೆ ಒಂದಾದರೂ ನಿಮಗೆ ನನ್ನ ಬರಹ ಮೆಚ್ಚಬೇಡವೆ. ಇದುವರೆಗೆ ನಾನು ನಿಮಗೆ ನನ್ನ ಬರಹವನ್ನೆಲ್ಲಾ ಕಳುಯಿಸಲು ವ್ಯೆಯಿಸಿದ ವೆಚ್ಚವನ್ನು ಉಪಯೋಗಿಸಿ ಕೊನೇಪಕ್ಷ ದನ, ಕುರಿ, ರಾಸುಗಳನ್ನಾದರು ಕೊಂಡಿದ್ದರೆ ಅವುಗಳಿಂದ ಉಪಜೀವನವನ್ನಾದರು ನಡೆಸಬಹುದಿತ್ತು. ನನ್ನ ಮೇಲೆ ಕರುಣೆಯಿತ್ತು ಒಂದು ಚುಟುಕು ಕವಿತೆಯನ್ನಾದರು ಪ್ರಕಟಿಸಬೇಡವೇ? ನನ್ನ ಕೋರಿಕೆಗೆ ಕಿಂಚಿತ್ತೂ ಬೆಲೆ ಕೊಡದ ನಿಮಗೆ ಮತ್ತೆ ಪತ್ರಬರೆಯಬೇಕೇ? ಈ ಬಾರಿ ನನ್ನ ಬರಹವನ್ನು ಬೇರೆ ಸಂಪಾದಕರಿಗೆ ಕಳುಯಿಸಿ ಕೊಟ್ಟರೆ ಹೇಗೆ? ಎಂದೆಲ್ಲಾ ನನ್ನ ಆತ್ಮಸಾಕ್ಷಿಯು ಪ್ರಶ್ನಿಸಿದರೂ, ಭೂಮಿಯ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಂಡಿಗಳನ್ನು ತೋಡಿ ಜಲವನ್ನು ಅಪೇಕ್ಷಿಸುವ ಬದಲು, ಒಂದೇ ಜಾಗದಲ್ಲಿ ಆಳವಾಗಿ ತೋಡಿದರೆ ನೀರು ದೊರೆಯದಿರುತ್ತದೆಯೇ? ಎಂದೂಹಿಸಿ ಅಂತೆಯೇ ಈ ಬಾರಿಯು ಸಹ ನನ್ನಲ್ಲಿರುವ ಎಲ್ಲ ಬರಹಗಳನ್ನು, ಸಾಯಿತ್ಯದ ಎಲ್ಲ ಪ್ರಕಾರಗಳಲ್ಲಿನ ಎಲ್ಲ ಕೃತಿಗಳನ್ನು (ಮಾಹಾಕಾವ್ಯವೊಂದನ್ನು ಬಿಟ್ಟು) ನಿಮಗೆ ಕೊನೇ ಬಾರಿಯಾಗಿ ಕಳಿಸಿರುತ್ತೇನೆ. ಜೊತೆಗೆ ಖಾಲಿ ಅಂಚೆಗಳನ್ನು ಲಘತ್ತಿಸಿದ್ದೇನೆ. ಈ ಬಾರಿಯೂ ನಿಮಗೆ ನನ್ನ ಬರಹಗಳನ್ನು ಪ್ರಕಟಿಸಲು ಇಷ್ಟವಿಲ್ಲದಿದ್ದಲ್ಲಿ, ನನ್ನ ಈ ಬರಹದ ಕಟ್ಟಿನೊಂದಿಗೆ ಮುಂಚೆ ಕಳುಯಿಸಿದ ಎಲ್ಲ ಬರಹಗಳನ್ನು ವಾಪಸ್ ಕಳುಯಿಸಿ ಕೊಡಿ.!
..ಇತಿ ನಿಮ್ಮ ನಂಬುಗೆಯಾ
(ಆಸವಾದಿ ಮತ್ತು ನಿರಾಶವಾದಿ)
ಎಂದು ಬಹಳ ಮರುಕದಿಂದ ಪತ್ರವನ್ನು ಬರೆದು ಕಳುಯಿಸಿದೆ. ಮತ್ತು ಈ ಬಾರಿ ಖಂಡಿತ ನನ್ನ ಕೋರಿಕೆಗೆ ಮರುಗಿ ನನ್ನ ಬರಹವನ್ನು ಸಂಪಾದಕರು ಪ್ರಕಟಣೆಗೆ ತರುವರು ಎಂದು ಬಲುವಾಗಿ ನಂಬಿದ್ದೇ. ತಿಂಗಳಾದರು ಅದೇ ನಿರಾಸೆ...ಯಾವ ಉತ್ತರದ ಕುರುಹು ಇಲ್ಲ. ದಿನಾ ಅಂಚೆ ಕಛೇರಿಗೆ ಅಲೆದು ಅಲೆದು ನಾನು ಅತಿ ಮೋಹಿಸಿ ಕೊಂಡುಕೊಂಡಿದ್ದ ಬಾಟ ಚೆಪ್ಪಲಿಗಳು ಸವೆದು ನೆಲಸಮವಾಗಿದ್ದವು. ನಾನು ಅಂಚೆಕಛೇರಿಗೆ ಹೋಗಿ ಬರುತಿದ್ದುದ್ದನು ನೋಡಿ 'ನಾಯಿ ಸಂತೆಗೆ ಹೋಗಿ ಹಾಗೇ ಮನೆಗೆ ಇಂತಿರುಗುವಂತೆ ನಿನ್ನ ಸ್ಥಿತಿ' ಎಂದು ಮನೆಯವರು ಗೇಲಿ ಮಾಡ ತೊಡಗಿದರು. ಅಂಚೆಯವನು 'ದಿನಾ ಸಾಯುವವರಿಗೆ ಅಳುವವರು ಯಾರು' ಎಂಬಂತೆ ಬರು ಬರುತ್ತಾ ನನ್ನ ಬರುವಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸತೊಡಗಿದನು. ಮರುಭೂಮಿಯಲ್ಲಿ ಮಳೆಗೆ ಕಾದಂತಾಗಿ ಬೇಸತ್ತು!, ಭೂಮಿ ತಲೆಕೆಳಗಾದರು ನನ್ನ ಕೃತಿಗಳಿಗೆ ಪ್ರಕಟಣಾ ಯೋಗವಿಲ್ಲ ಎಂದು ಮನಗಂಡೇ.
ಅಂಚೆ ಕಛೇರಿಗೆ ಹುಚ್ಚನಂತೆ ಅಲೆಯುವುದನ್ನು ಬಿಟ್ಟೆ. ಓದು ಬರಹಕ್ಕೆ ಕೆಲಕಾಲ ತಿಲಾಂಜಲಿಯನ್ನು ಕೊಟ್ಟು ಮನೆ ಕೆಲಸದ ಕಡೆಗೆ ಗಮನ ಹರಿಸ ತೊಡಗಿದೆ.

ಬರಹ, ಪ್ರಕಟಣೆ, ಸಂಪಾದಕರು ಪ್ರಕಾಶಕರು ಎಲ್ಲವನ್ನು ಮರೆತದ್ದಾಗಿತ್ತು. ಈಗಿರಬೇಕಾದರೆ ಒಂದು ದಿನ ಮನೆಯ ಪಡಸಾಲೆಯಲ್ಲಿ ಏನನ್ನೋ ಯೋಚಿಸಿ ಮೌನವಾಗಿ ಕುಳಿತಿದ್ದೆ. ಅಡುಗೆಮನೆಯಿಂದ ಒಂದು ಬಿಳಿ ಕಾಗದದ ಹಾಳೆ ನನ್ನ ಕಡೆಗೆ ಗಾಳಿಯಲ್ಲಿ ತೂರಿಕೊಂಡು ಬಂತು. ಅದರಲ್ಲಿ ನಾಲ್ಕು ನಾಲ್ಕು ಸಾಲುಗಳಂತೆ ನೀಲಿ ಬಣ್ಣದ ಸಾಹಿಯಲ್ಲಿ ಬರೆದ ಒಂದು ಕವಿತೆ!. ನೋಡಿದೆ, ಆಶ್ಚರ್ಯವಾಯಿತು! ಮತ್ತೂ ನೋಡಿದೆ, ಹೌದು, ಹೌದು ನನ್ನದೇ ಕವಿತೆ!. ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ.! ಕೆಲ ದಿನಗಳ ಹಿಂದೆ ಹಚ್ಚಾಗಬಹುದೆಂಬ ಮೋಹದಿಂದ ನಾನು ಬರೆದು ಸಂಪಾದಕರಿಗೆ ಕಳುಯಿಸದ ನನ್ನ ಒಂದು ಕವಿತೆ ಗಾಳಿಯಲ್ಲಿ ಅನಾಥವಾಗಿ ತೂರಿಕೊಂಡು ಬಂದು ನನ್ನ ಬಳಿಗೆ ಸೇರಿದೇ!.
ಕಾಗದ ಬಂದ ದಿಕ್ಕಿಗೆ ನೋಡಿದಾಗ ಅಮ್ಮ ಅಡುಗೆಮನೆಯಲ್ಲಿ ತರಕಾರಿ ಹಚ್ಚುತ್ತಿದ್ದಳು. ಹೋಗಿ "ಅಮ್ಮ ಈ ಕಾಗದ ಎಲ್ಲಿಂದ ಬಂತು" ಎಂದು ಕೇಳಿದೆ. ಅಮ್ಮ ಅದನ್ನೊಮ್ಮೆ ಬಿಟ್ಟಕಣ್ಣು ಬಿಟ್ಟಂತೆ ನೋಡಿ "ನಿಮ್ಮ ಅಪ್ಪ ನಂಜನಗೂಡಿಗೆ ರೇಷ್ಮೆಗೂಡು ಮಾರಲೆಂದು ಹೋಗಿದ್ದರಲ್ಲ, ಬರುವಾಗ ಅಡುಗೆ ಸಾಮಾನು ತರಲು ಹೇಳಿದ್ದೇ. ನೋಡು ಆ ಅಂಗಡಿಯವನು ಅವನ ಮನೆ ಹಾಳಾಗ! ಪಾಲಿತೀನ್ ಕಾಗ್ದದಲ್ಲಿ ಅಕ್ಕಿ ಬೇಳೆ ಕಟ್ಟಿ ಕೊಡದೇ ಈ ಹರಿದು ಹೋಗೋ ಕಾಗದದಲ್ಲಿ ಕಟ್ಟಿಕೊಟ್ಟು ಅಕ್ಕಿ ಬೇಳೆ ಎಲ್ಲಾ ಬೆರೆಸಿಕೊಂಡಿದೆ" ಎಂದು ಅಂಗಡಿಯವನನ್ನು ಶಪಿಸಿದಳು. ಪಕ್ಕದಲ್ಲಿ ಇಟ್ಟಿದ್ದ ಸಕ್ಕರೆ, ಅಕ್ಕಿ, ಮೆಣಸು ಪೊಟ್ಟಣಗಳನ್ನೆಲ್ಲ ಪರಿಶೀಲಿಸಿದೆ, ಎಲ್ಲದರಲ್ಲೂ ನನ್ನದೇ ಬರಹಗಳಿರುವ ಕಾಗದಗಳು. ತ್ರಿಕೋಣಾಕೃತಿಯಲ್ಲಿ ಕೆಳಗೆ ಹೋದಂತೆ ಚೂಪಾಗಿ, ಸುತ್ತಲೂ ಬಿಳಿದಾರದಿಂದ ಬಂದಿಸಲ್ಪಟ್ಟು ನಿರ್ಜೀವವಾಗಿ ಬಿದ್ದಿದ್ದವು. ನೀನು ಬರೆದ ಕವಿತೆಗೆ ಇಷ್ಟೇ ಬೆಲೆ! ಕಿರಾಣಿ ಅಂಗಡಿಯಲ್ಲಿ ಅಕ್ಕಿ, ಬೇಳೆ, ಸಕ್ಕರೆ ಪೊಟ್ಟಣಗಳನ್ನು ಕಟ್ಟಿಕೊಡಲು ಮಾತ್ರ ಯೋಗ್ಯವಾಗಿರುವುವು ನಿನ್ನ ಈ ಬರಹಗಳು ಎಂದು ಆ ಪೊಟ್ಟಣಗಳು ನನ್ನನು ನೋಡಿ ಹಣಕಿಸಿದಂತೆ ತೋರಿತು.
ಎಲ್ಲಿಲ್ಲದ ಕೋಪ, ಉದ್ರೇಕ, ಆವೇಶ ಒಮ್ಮೆಗೆ ಮನದಲ್ಲಿ ಜ್ವಾಲಾಮುಖಿಯಂತೆ ಕುದಿಯಲಾರಂಭಿಸಿತು.
ಎಲಾ ಅವಿವೇಕಿ ಸಂಪಾದಕ!. ನಾನು ಹಗಲಿರುಳು ಕಷ್ಟ ಪಟ್ಟು ಬರೆದು ಕಳುಯಿಸಿದೆ ಸಾಹಿತ್ಯವನ್ನು ಕಿಂಚಿತ್ತೂ ಗೌರವಿಸದೇ, ಅದನ್ನು ಮೂರುಕಾಸಿಗೆ ಕಿರಾಣಿ ಅಂಗಡಿಯವನಿಗೆ ಮಾರಿಬಿಟ್ಟಿದ್ದಾನಲ್ಲ!. ಪ್ರಕಟಿಸಲು ಇಷ್ಟವಿಲ್ಲದಿದ್ದರೆ ನಾನು ಕಳುಯಿಸಿದ ಖಾಲಿ ಅಂಚೆಯಲ್ಲೇ ವಾಪಸ್ ಕಳುಯಿಸಬಹುದಿತ್ತಲ್ಲ? ಎಂದು ಕಿಡಿಕಾರುತ್ತ, ಈ ಮನ್ನಿಸಲಾಗದ ಪ್ರಕಾಶಕನ ಕೃತ್ಯಕ್ಕೇ ನೇರವಾಗಿ ಹೋಗಿ ನ್ಯಾಯ ಕೇಳುವುದೆಂದು ನಿರ್ಧರಿಸಿದೆ.

ಮಾರನೇ ದಿನಾ ಮುಂಜಾನೆ ಮೊದಲನೇ ಬಸ್ನಲ್ಲಿ ನಂಜನಗೂಡಿಗೆ ಪ್ರಯಾಣ. ಮುಂಜಾನೆ ಹೊರಡುವ ಮೊದಲನೇ ಬಸ್ ಆದ್ದರಿಂದ ಹೆಚ್ಚು ಜನರು ಬಸ್ಸನ್ನು ಏರಿದ್ದಂತೆ ಕಾಣಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ವಿರಳವಾಗಿ ಕೂತು ತೂಕಡಿಸುತ್ತಿದ್ದರು. ಕಂಡಕ್ಟರ್ ಮಹಾಶಯ "ಟಿಕೆಟ್ ಟಿಕೆಟ್" ಎಂದು ಅತ್ತಿರ ಬಂದಾಗ, ಹತ್ತು ರೂಪಾಯಿ ಕೊಟ್ಟು 'ನಂಜನಗೂಡು, ಗಣಪತಿ ವೃತ್ತ' ಒಂದು ಟಿಕೆಟ್ ಎಂದೇ. ಕಂಡಕ್ಟರ್ ಗಂಟುಮುಖ ಹಾಕಿಕೊಂಡು " ಏನ್ರಿ ಬೆಳಿಗ್ಗೆ ಬೆಳಿಗ್ಗೆ ಹತ್ತು ರೂಪಾಯಿ ನೋಟ್ ಕೊಟ್ರೆ ಚಿಲ್ರೆಗೆ ನಾವೆಲ್ಲಿ ಸಾಯೋಣ, ಮೂರು ರೂಪಾಯಿ ಎಂಠಾಣೆ ಚಿಲ್ಲರೇ ಕೊಡಿ" ಎಂದನು. ಚಿಲ್ಲರೇ ಇಲ್ಲ ಸಾರ್ ಎಂದು ನನ್ನ ಮೇಲಂಗಿಯ ಜೋಬನ್ನು ಅಗಲಿಸಿ ತೋರಿಸಿದೆ. ಯಾಕೆಂದರೆ ಮನುಶ್ಯನಿಗೆ ಮನುಶ್ಯನ ಮೇಲಿರುವ ಮಾತಿನ ನಂಬಿಕೆಗಿಂತ ಅವನ ಕಣ್ಣಮುಂದೆ ಗೋಚರವಾಗುವ ದೃಶ್ಯದಮೇಲೆ ಹೆಚ್ಚು ನಂಬಿಕೆ! ನನ್ನ ಜೋಬಿನಲ್ಲಿ ಚಿಲ್ಲರೆ ಹಣ ಇಲ್ಲದಿದ್ದನ್ನು ಪ್ರತ್ಯಕ್ಷವಾಗಿ ನೋಡಿಯು ಸಹ ತೃಪ್ತನಾಗದ ಆತ ಏನೇನೋ ಒಳಗೊಳಗೇ ಗೊಣಗುತ್ತ ಮೂರು ರೂಪಾಯಿ ಎಂಟಾಣೆಯ ಟಿಕೆಟ್ ಅರಿದು ಅದರ ಹಿಂದೆ ಆರು ರೂಪಾಯಿ ಎಂಟಾಣೆ ಬಾಕಿ ಬರೆದು "ಇಳಿಯುವಾಗ ಬಾಕಿ ಚಿಲ್ಲರೇ ಕೇಳಿ ಇಸ್ಕೊಳ್ಳಿ" ಎಂದು ಬೇರೊಬ್ಬನ ಕಡೆಗೆ "ಟಿಕೆಟ್ ಟಿಕೆಟ್" ಎಂದರಚುತ್ತ ಕೈ ಚಾಚಿದ. ಸರ್ಕಾರದವರು ಪ್ರತಿಯೊಂದು ಟಿಕೆಟ್ ಬೆಲೆಯನ್ನು ಎರಡು ರೂಪಾಯಿ ನಾಲ್ಕಾಣೆ, ಮೂರು ರೂಪಾಯಿ ಎಂಟಾಣೆ, ನಾಲ್ಕು ಮುಕ್ಕಾಲು ಈಗೆ ಶಿವನ ಮುಕ್ಕಣ್ಣಿನಂತೆ ಮುಕ್ಕು ಮುಕ್ಕಾಗಿ ನಿಗದಿಪಡಿಸಿರುವುದು ಯಾಕೆಂದು ತಿಳಿಯದು. ಎರಡು ರೂಪಾಯಿ ಕಾಲಣೆ ಟಿಕೆಟ್ ಅನ್ನು ಎರಡು ರೂಪಾಯಿ ಮಾಡಿ, ಮೂರು ರೂಪಾಯಿ ಮುಕ್ಕಾಲಾಣೆ ಟಿಕೆಟ್ ಅನ್ನು ನಾಲ್ಕು ರೂಪಾಯಿ ಮಾಡಿದ್ದರೆ, ಇವರ ಗಂಟೆನೂ ಹೋಗುತ್ತಿತ್ತು. ಹಾಗ ಟಿಕೆಟ್ ಕೊಡುವವನಿಗೂ, ಸಾರ್ವಜನಿಕರಿಗೂ ತುಂಬಾ ಉಪಕಾರವಾಗುತ್ತಿತ್ತು ಅಲ್ಲವೇ. ಚಿಲ್ರೆಗೆ ಕಂಡಕ್ಟರ್ ಮಹಾಶಯನ ಅತ್ತಿರ ಬೈಸಿಕೊಳ್ಳುವುದಾದರು ತಪ್ಪುತ್ತಿತ್ತು.
ನನಗೆ ಆ ಆರು ರೂಪಾಯಿ ಎಂಟಾಣೆ ಕಣ್ಣಮುಂದೇ ಕಳೆದು ಹೋದಂತೆ ಎನಿಸಿತು. ಏಕೆಂದರೆ ಇದುವರೆಗೂ ಚಿಲ್ಲರೇ ಇಲ್ಲ ಅಂತ ಹೇಳಿ ಟಿಕೆಟ್ ಹಿಂದೆ ಬರೆದುಕೊಟ್ಟ ಯಾವುದೇ ಹಣ ನನ್ನ ಕೈ ಸೇರಿಲ್ಲಾ. ಇಳಿಯುವಾಗ ಅದೇನು ಮರವಿಯೋ ಏನೋ, ಇಳಿದ ತಕ್ಷಣ ಅಯ್ಯೋ! ಬಾಕಿ ಚಿಲ್ಲರೇ ಪಡೆಯಲು ಮರೆತೇನಲ್ಲ ಎಂದು ಕೊರಗಿದ್ದೇ ಹೆಚ್ಚು. ಇಳಿಯುವಾಗ ನೆನಪಿಗೆ ಬಾರದ ಈ ಅನಿಷ್ಠ ನೆನಪು, ಬಸ್ ಇಳಿದ ತಕ್ಷಣ ನೆನಪಾಗುವುದು. ಮತ್ತೆ ಬಾಕಿ ಚಿಲ್ಲರೇ ಕೈ ತಪ್ಪಿ ಹೋಯಿತಲ್ಲ ಎಂದು ಮರುಗುವುದಿದೆಯಲ್ಲ ಅದು ದುಡ್ಡು ಕಳೆದುಕೊಂಡಿದ್ದಕ್ಕಿಂತ ಘೋರ ಯಾತನೆ. ದುಡ್ಡಿಗೆ ದುಡ್ಡು ನಷ್ಟ, ಮನಸ್ಸಿಗೆ ಹಣ ಕಳೆದುಕೊಂಡ ವ್ಯೆತೆ ಬೇರೇ!. ಈ ಬಾರಿ ಹಾಗಾಗಬಾರದು, ಹೇಗಾದರೂ ಮಾಡಿ ಬಸ್ ಇಳಿಯುವ ಮುನ್ನಾ ಬಾಕಿ ಹಣ ಕೇಳಿ ಪಡೆಯಲೇ ಬೇಕೆಂದು, ಬಾಕಿ ಹಣ ಆರು ರೂಪಾಯಿ ಎಂಟಾಣೆಯನ್ನು ಮನಸ್ಸಿನಲ್ಲೇ ಜಪಿಸುತ್ತಿದ್ದೆ. ನಮ್ಮೂರಿನಲ್ಲಿ ಬಸ್ ಏರುವಾಗ ಬಿಕೋ ಎನ್ನುತ್ತಿದ್ದ ಬಸ್, ಬರು ಬರುತ್ತಾ ಜನಸಂಖ್ಯೆ ಹೆಚ್ಚಾಗಿ ಬಸ್ಸಲ್ಲಿ ನೂಕುನುಗ್ಗಲು ಆರಂಭವಾಗಿತ್ತು. ಕುಳಿತಿರುವವರನ್ನು ಬಿಟ್ಟು ನಿಂತಿರುವವರು ಒಬ್ಬರು ನಿಲ್ಲುವ ಜಾಗದಲ್ಲಿ ಇಬ್ಬಿಬ್ಬರು ನಿಂತಿದ್ದರು. ಬಾರತದ ಜನಸಂಖ್ಯೆ ಹೆಚ್ಚುತ್ತಿದೆಯೋ ಕಮ್ಮಿಯಾಗುತ್ತಿದೆಯೋ ಎಂದು ಈ ಬಸ್ಗಳನ್ನೇ ನೋಡಿ ತಿಳಿಯಬೇಕು!. ನಿಗದಿಪಡಿಸಿದ ಜನರಿಗಿಂತ ಎಲ್ಲೆಲ್ಲಿ ಮೂರುಪಟ್ಟು ಅಧಿಕ ಜನ ಬಸ್ನಲ್ಲಿ ಪ್ರಯಾಣಿಸುತ್ತಾರೋ ಆ ಪ್ರಾಂತ್ಯಗಳೆಲ್ಲಾ ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು. ಭಾರತದ ಬಹುತೇಕ ಭಾಗಗಳಲ್ಲಿ ಈ ಮುಂಚೂಣಿಯನ್ನೇ ಕಾಣಬಹುದು. ಆದ್ದರಿಂದ ಗಾಲ್ಸಿಯನ್ ಕರ್ವ್ ನಲ್ಲಿ ಭಾರತದ ಜನಸಂಖ್ಯೆ ಏರುಮುಖದಲ್ಲಿದೇ ಎಂದು ಹೇಳಬಹುದು. ಚೈನಾ ದೇಶವನ್ನು ಹಿಂದಿಕ್ಕಿ ಬಹುಬೇಗ ಮೊದಲನೇ ಸ್ಥಾನ ನಮ್ಮದಾಗುವುದರಲ್ಲಿ ಎಳ್ಳಷ್ಟೂ ಸಂಶಯಬೇಡ.
ಆರು ರೂಪಾಯಿ ಎಂಟಾಣೆಯನ್ನು ಜಪಿಸುತ್ತಿದ್ದ ನನ್ನ ಮನಸ್ಸು ಕ್ಷಣಾರ್ಧದಲ್ಲಿ ನನ್ನ ಕವನಗಳನ್ನು ಕಿರಾಣಿ ಅಂಗಡಿಯವನಿಗೆ ಅಕ್ಕಿ ಬೇಳೆ ಪೊಟ್ಟಣ ಕಟ್ಟಲು ಮಾರಿಕೊಂಡ ಸಂಪಾದಕನ ಕಡೆಗೆ ಹೊರಳಿತು. ಹೋದ ಕೂಡಲೇ ಅವನನ್ನು ಹೇಗೇ ತರಾಟೆಗೆ ತೆಗೆದುಕೊಳ್ಳಬೇಕೆಂದು ಯೋಚಿಸತೊಡಗಿತ್ತಿರುವಾಗ ಅಷ್ಟರಲ್ಲೇ ಗಣಪತಿ ವೃತ್ತಾ ಬಂದಿತು. ಕಂಡಕ್ಟರ್ ಗಣಪತಿ ವೃತ್ತಾ ಬೇಗ ಬೇಗ ಇಳಿರಿ ಎಂದು ಕೂಗುತಿದ್ದನು. ಗಿಜಿಗುಡುವ ಜನರ ಸಂದಿಯಿಂದ ನುಸುಳಿ ಅವಸರದಲ್ಲಿ ಬಸ್ ಇಳಿಯುವಾಗ ಬಾಕಿ ಆರು ರೂಪಾಯಿ ಎಂಟಾಣೆ ಕೇಳಲು ಮರೆತು ಇಳಿದಿದ್ದಾಯಿತು. ಬಸ್ ಇಳಿದ ತಕ್ಷಣ ಬಾಕಿ ಹಣದ ನೆನಪಾಗಿ ಬೆಪ್ಪನಂತೆ ಬಸ್ಸು ಹೋದ ಕಡೆಗೇ ಬಿಟ್ಟಕಣ್ಣು ಬಿಡುತ್ತಾ ನೋಡುತ್ತಾ ನಿಂತೆ.
ಮಧ್ಯಾಹ್ನದ ಹುರಿ ಬಿಸಿಲು ಮುಖಕ್ಕೆ ರಾಚುತ್ತಿತ್ತು. ಆಟೋದಲ್ಲಿ ಹೋಗೋಣವೆಂದು ಯೋಚನೆ ಹೊಳೆದಾಗ, ಮನಸ್ಸು ಬಸ್ಸಿನಲ್ಲಿ ಕಳೆದುಕೊಂಡ ಹಣವನ್ನು ಕಾಲು ನಡಿಗೆಯಲ್ಲಿ ನಡೆದು ಸರಿಗಟ್ಟು ಎಂದು ಸಲಹೆ ಕೊಟ್ಟಿತು. ಕಾಗದದಲ್ಲಿ ಬರೆದುಕೊಂಡಿದ್ದ ಸಂಪಾದಕನ ವಿಳಾಸವನನ್ನೊಮ್ಮೆ ಜೋಬಿನಿಂದ ತೆಗೆದು ನೋಡಿದೆ. 'ಗೀತಾಂಜಲಿ ಪುಸ್ತಕ ಪ್ರಕಾಶನಾಲಯ, 2ನೇ ಅಡ್ಡ ರಸ್ತೆ, 6 ನೇ ಕ್ರಾಸ್, ನಂಜನಗೂಡು' ಎಂದು ಬರೆದಿತ್ತು. ಕಣ್ಣೆತ್ತಿ ಮೇಲೆ ನೋಡಿದೆ, ಫಳಾರಣೆ ಮುಖಕ್ಕೆ ಬಡಿಯುವ ಬಿಸಿಲು. ದಾರಿಯಲ್ಲಿ ಈ ವಿಳಾಸ ಎಲ್ಲಿ ಬರುವುದೆಂದು ಕೇಳಿಕೊಂಡು ದಾಪುಗಾಲಿಕ್ಕುತ್ತ ನಡೆದೇ. ಎದುರಿಗೆ ಕಾಮತ್ ಹೋಟೆಲ್ ಒಂದು ಕಾಣಿಸಿತು. ಆರು ರೂಪಾಯಿ ಎಂಟಾಣೆ ಮತ್ತೆ ನೆನಪಿಗೆ ಬಂತು. ಈ ಹಣ ಇದ್ದಿದ್ದರೆ, ಒಂದು ಬಿಸಿ ಬೇಳೆ ಬಾತ್ ಅಥವಾ ಕಾರ ಬಾಥ್, ಕೊನೆ ಪಕ್ಷ ಒಂದು ಉಪ್ಪಿಟು ಜೊತೆಗೆ ಆಂಬೊಡೇ, ಒಂದು ಕಪ್ ಚಹಾ ಕುಡಿದು ಹೊಟ್ಟೆ ಮೆತ್ತಗೆ ಮಾಡಿಕೊಂಡು ಪ್ರಕಾಶಕನೊಡನೆ ಜಗಳವಾಡಬಹುದಿತ್ತು, ಚ್ಛೇ ನನ್ನ ಮರವಿಗಿಷ್ಟು! ಎಂದು ನೆನೆದುಕೊಂಡೇ 6ನೇ ಕ್ರಾಸ್ಗೇ ಬಂದು ಸೇರಿದೆ.
ಗೀತಾಂಜಲಿ ಪುಸ್ತಕ ಪ್ರಕಾಶನಾಲಯ, ಕಣ್ಣು ಕೆರಳಿಸಿ ಹುಡುಕಿದೆ!. ಎಲ್ಲೂ ಈ ಹೆಸರು ಗೋಚರಿಸಲಿಲ್ಲ. ಪಕ್ಕದಲ್ಲಿ ಹಣ್ಣು ಮಾರುವನೊಬ್ಬ ಕಂಡ, ಅವನಿಗೆ ಈ ವಿಳಾಸದಲ್ಲಿರುವ ಪುಸ್ತಕ ಪ್ರಕಾಶನಾಲೆಯ ಎಲ್ಲಿದೆ ಎಂದು ಕೇಳಿದೆ. ಅವನು ತನ್ನ ಬೆನ್ನ ಹಿಂದೆ ಇದ್ದ ದೊಡ್ಡ ಕಿರಾಣಿ ಅಂಗಡಿಯನ್ನು ತೋರಿಸಿ "ಇದೆ ನೋಡಿ ಸ್ವಾಮಿ ನೀವು ಕೇಳುವ ವಿಳಾಸ" ಎಂದು ತೋರಿಸಿದ.
ಮೇಲೆ ನಾಮಫಲಕದಲ್ಲಿ ದೊಡ್ಡದಾಗಿ ಲಾಲ್ ಶೇಟ್ ಕಿರಾಣಿ ಅಂಗಡಿ ಎಂದು ಕೆಂಪಕ್ಷರದಲ್ಲಿ ಬರೆದಿತ್ತು. ಅಂಗಡಿ ಓಳಗೆ ಧಡೂತಿ ಹೊಟ್ಟೆಯ ಮನುಷ್ಯನೊಬ್ಬ ಕುಳಿತಿದ್ದ. ಪ್ರಕಾಶನ ವೃತ್ತಿ ಬಿಟ್ಟು ಕಿರಾಣಿ ಅಂಗಡಿ ಇಟ್ಟುಕೊಂಡನೆ ನಮ್ಮ ಸಂಪಾದಕ ಎಂದು ಅನುಮಾನವಾಯಿತು. ಅತ್ತಿರ ಹೋಗಿ ಸ್ವಾಮಿ ಇಲ್ಲಿ ಗೀತಾಂಜಲಿ ಪುಸ್ತಕ ಪ್ರಕಾಶನಾಲಯ ಇತ್ತಲ್ಲ ಎಲ್ಲಿ ಎಂದು ಕೇಳಿದೆ. ಶೇಟ್, ಬಾಯಿ ತುಂಬಾ ಎಲೆ ಅಡಿಕೆ ಜಿಗಿಯುತ್ತಿದ್ದವ ನನ್ನ ಕಡೆ ನೋಡಿ ಕೈ ಸಣ್ಣೆಯಲ್ಲೇ ಸ್ವಲ್ಪತಡಿ ಎಂದು ಸೂಚಿಸುತ್ತ ರಕ್ತದ ಬಣ್ಣಕ್ಕೆ ತಿರುಗಿದ್ದ ಎಲೆ, ಅಡಿಕೆ, ಹೊಗೆ ಸೊಪ್ಪನ್ನು ಅಂಗಡಿಯ ಆಚೆಮೂಲೆಗೆ ಒಮ್ಮೆಲೇ ಉಗಿದು, ಹಲ್ಲು ಕಿರಿಯುತ್ತ ನೀವು ಕೇಳಿ ಕೊಂಡು ಬಂದ ಅಂಗಡಿ ಬೇರೆ ಕಡೆಗೆ ಸ್ಥಳಾಂತರಿಸಿದೆ ಸ್ವಾಮಿ, ಇವೊತ್ತು ನಾನು ಯಾರಮುಖ ನೋಡಿ ಎದ್ದೇನೋ ಕಾಣೆ, ನಿಮ್ಮನ್ನು ಶೇರಿಸಿ ಮೊರುನಾಲ್ಕು ಜನ ಆ ಪುಸ್ತಕದ ಅಂಗಡಿಯನ್ನು ಕೇಳಿಕೊಂಡು ಬಂದರು" ಎಂದು ಉತ್ತರಿಸಿದ. ಇದನ್ನು ಕೇಳಿ ನಾನು ಪೆಚ್ಚಾದೆ. ನಡೆದುದ್ದೇನೆಂದು ತಟ್ಟನೆ ನನಗೆ ಅರಿವಾಯುತು. ಆರು ತಿಂಗಳಿಂದ ಕಿರಾಣಿ ಅಂಗಡಿಗೆ ಅಕ್ಕಿ ಬೇಳೆ ಪೊಟ್ಟಣ ಕಟ್ಟುವುದಕ್ಕಾಗಿ ನನ್ನ ಬೆಳೆಬಾಳುವ ಸಾಯುತ್ಯದ ಕಾಗದಗಳನ್ನು ಶೇಟ್ ಗೆ ಪುಕ್ಕಟೆಯಾಗಿ ಕಳುಯಿಸಿ ಕೊಡುತ್ತಿದ್ದೆ. ಮೊದಲ ಸಲದ ಪತ್ರಕ್ಕೆ ಯಾವುದೇ ಉತ್ತರ ಬರದಿದ್ದನ್ನು ತಿಳಿದು ಹೆಚ್ಚೆತ್ತುಕೊಳ್ಳಬೇಕಾಯಿತು. ಆದರೆ ಏನು ಮಾಡುವುದು, ಅದಾಗಲೇ ಕಾಲ ಮಿಂಚಿಹೋಗಿತ್ತು. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವರು, ಆದರೆ ಚಿಂತಿಸದೆ ಇರಲಿಕ್ಕೆ ಹೇಗೆ ಸಾಧ್ಯ, ಒಂದು ವರ್ಷದ ಸತತ ಪ್ರಯತ್ನವಲ್ಲವೇ?. ಹಣ, ವಸ್ತುಗಳಾಗಿದ್ದರೆ ಹೇಗೋ ಸಂಪಾದಿಸಿಬಹುದಿತ್ತು. ನಾನು ಬರೆದ ಕೃತಿಗಳೆಲ್ಲವನ್ನು ನೀರಿನಲ್ಲಿ ಹೋಮ ಮಾಡಿದಂತಾಯಿತು.
ಕಿರಾಣಿ ಅಂಗಡಿಯ ಒಳಬಾಗದ ಛಾವಣಿಯ ಮೂಲೆಯೊಂದರಲ್ಲಿ ಮಡಚಿದ ಕಬ್ಬಿಣದ ತಂತಿಯೊಂದಲ್ಲಿ ಕೆಲಕಾಗದಗಳು ನೇತುಬಿದ್ದಿದ್ದವು. ಅವು ನನ್ನದೇ ಬರಹದ ಕಾಗದಗಳೆಂದು ತಿಳಿಯಿತು. ಅತ್ತ ಬೆರಳು ಮಾಡಿ ಆ ಕಾಗದಗಳೂ........ಎಂದು ಕೇಳುವಸ್ಟರಲ್ಲೇ, ಶೇಟ್ ಎಲೆಅಡಿಕೆ ಹಾಕಿ ಕೆಂಪಾಗಿದ್ದ ಬಾಯನ್ನು ತೆರೆದು ಹಲ್ಲು ಕಿರಿಯುತ್ತ "ಓ ಅದಾ ಯಾರೋ ಪಾಪ ನಮ್ಮ ಅಂಗಡಿಗೆ ಪುಕ್ಕಟೆ ಕಾಗದಗಳನ್ನು ಅಂಚೆ ಮೂಲಕ ಕಳಿಸುತ್ತಿರುವರು. ನಾನು ಸಹ ಪುಕ್ಕಟೆ ಬರುವುದನ್ನು ಹೇಕೆ ಬೇಡಬೇಕು ಅದಕ್ಕೆ ಅಂಗಡಿ ಉಪಯೋಗಕ್ಕೇ ಬಳಸಿಕೊಂಡೇ" ಎಂದ. ಅಯ್ಯೋ ನಿನ್ನ ಮನೆ ಹಾಳಾಗ ಎಂದು ಮನದಲ್ಲೇ ನೆನೆಯುತ್ತಾ "ನಿಮಗೆ ಓದು ಬರಹ ಬರುವುದಿಲ್ಲವೇ" ಎಂದು ವಕ್ರದೃಷ್ಟಿ ಪ್ರದರ್ಶಿಸುತ್ತ ಕೇಳಿದೇ.
"ಏನ್ ಸ್ವಾಮಿ ಓದು ಬರಹ ಕಲ್ತಿದ್ರೆ ಇಷ್ಟೊಂದು ದೊಡ್ಡ ಕಿರಾಣಿ ಅಂಗಡಿ ನಡೆಸೋದಕ್ಕೆ ಆಗುತ್ತಿತ್ತೆ" ಎಂದಾ.
ಅವನು ಅವಿದ್ಯಾವಂತಿಕೆಯೇ ಈ ವ್ಯಾಪಾರಕ್ಕೆ ಮೊದಲ ಅರ್ಹತೆ, ವಿದ್ಯ ಕಲಿತಿದ್ದರೆ ಈ ಅಂಗಡಿ ನಡೆಸುವುದಕ್ಕೆ ಆಗುತ್ತಿರಲಿಲ್ಲ, ಆದ್ದರಿಂದ ವಿದ್ಯ ಕಲಿತವರು ಕಿರಾಣಿ ಅಂಗಡಿ ನಡೆಸಲು ನಾಲಯಕ್ ಎಂದು ಹೇಳದೆಯೇ ಹೇಳಿದಾ. ನನಗಾಗ ನನ್ನ ಲೇಖನಗಳು ಹೇಕೆ ವಾಪಸ್ ಬರಲಿಲ್ಲ ಎಂದು ಅರಿವಾಯಿತು. ಓದು ಬರಹ ಬರದಿದ್ದವನಾಗಿದ್ದರಿಂದ, ಸಾಹಿತ್ಯವನ್ನು ವಾಪಸ್ ಕಳುಯಿಸಿ ಕೊಡಲು ಲಗತ್ತಿಸಿದ್ದ ಖಾಲಿ ಅಂಚೆಯನ್ನು ಕಿರಾಣಿ ಅಂಗಡಿಗೆ ಉಪಯೋಗಿಸಿಕೊಂಡಿದ್ದ. ಅಂಗಡಿಯಲ್ಲಿ ಕೆಲಸಕಿದ್ದ ಒಬ್ಬ ಹುಡುಗಾ ಆ ಮೂಲೆಯಲ್ಲಿ ಜೋತು ಬಿದ್ದ ನನ್ನ ಸಾಯಿತ್ಯದ ಕಾಗದವೊಂದನ್ನು ಟರ್ ಎಂದು ಎಳೆದು ಪೊಟ್ಟಣ ಕಟ್ಟಲಾರಂಭಿಸಿದ. ನನ್ನ ಹೃದಯವನ್ನೇ ಬಗೆದು ಎಳೆದಂತಾಯಿತು. 'ಬಂದದಾರಿಗೆ ಸುಂಕವಿಲ್ಲ' ಎಂಬಂತೆ ನಿರಾಶಿತನಾಗಿ ಮನೆಗೆ ಹೊರಟೆ.
ಹೊರಡುವಾಗ ಅನೇಕ ಯೋಚನೆಗಳು ಮನಸಲ್ಲಿ ಸುಳಿದು ಹೋದವು. ಬೆಳಿಗ್ಗೆ ಬರುವಾಗ ಶಕುನ ರೂಪದಲ್ಲಿ ಬೆಕ್ಕನ್ನು ನೋಡಲಿಲ್ಲ, ಬರುವಾಗ ಮುತ್ತೈದೆ ದರುಶನವಾಗಿದ್ದಿತು ಕೂಡ, ಜೊತೆಗೆ ನನ್ನನು ನೋಡು ಯೋಗ ಬರುತ್ತದೆ ಎಂಬ ನಾಮಫಲಕವಿರುವ ಜೋಡಿ ನರಿಗಳ ಫೋಟೋ ಬೇರೆ ಕಣ್ಣಿಗೆ ಬಿದ್ದಿತು. ನಾನು ಈ ಮೂಢನಂಬಿಕೆಗಳ ಶಕುನಗಳ ಸಾಧಕ ಬಾದಕಗಳನ್ನು ನಂಬವವನಲ್ಲದಿದ್ದರು, ಲೋಕರೂಢಿಯಂತಾದರು ಕಿಂಚಿತ್ತೂ ಅದೃಷ್ಟದ ಕರುಣೆ ನನ್ನ ಪಾಲಾಗಬರಾದಿತ್ತೆ?. ಬರೆದ ಸಾಯಿತ್ಯ ಕೈ ಬಿಟ್ಟು ದೂರಾಯಿತು. ಸಾಹಿತ್ಯವನ್ನು ನಂಬಿ ದುಡಿಯದೆ ಮನೆಯಲ್ಲಿ ಅನ್ನಕ್ಕೆ ದಂಡ, ಭೂಮಿಗೆ ಬಾರ ಎಂದೆನಿಸಿಕೊಂಡಂತಾಯಿತು. ಒಟ್ಟಿನಲ್ಲಿ ಅಲ್ಲಿಗೆ ನನ್ನ ಬಹು ದೀರ್ಘಕಾಲ ಬರಹಗಳ ಒಟ್ಟು ಸಂಗ್ರಹ, ಲಾಲ್ ಶೇಟ್ ಕಿರಾಣಿ ಅಂಗಡಿ ಮುಕಾಂತರ ಮನೆಮನೆಗಳಿಗೂ ಅನಧಿಕೃತವಾಗಿ ಹಂಚಲ್ಪಟ್ಟಿದ್ದವು. ನನ್ನ ಕಥಾಕವನಗಳು ಮತ್ತೇ ಬಾರದ ರೀತಿಯಲ್ಲಿ ನನ್ನನಗಲಿ ಬಹು ದೂರ ಸಾಗಿದ್ದವು. ನನ್ನ ಸಾಯಿತ್ಯದ ಮೊದಲನೇ ಕನಸಿನ ಕೂಸು ಚಿಗುರುವ ಮುನ್ನವೇ ನೆಲಕಚ್ಚಿ ಬಾಡಿ ಹೋಗಿತ್ತು.

ಈಗ ಮತ್ತೆ ಬರೆಯುವ ಮನಸ್ಸಾಗಿದೆ, ಬರೆಯುತ್ತಿದ್ದೇನೆ. ಎರಡನೇ ಕೂಸಾದರು ಕೈ ಸೇರುವುದೇ ಎಂದು ನೋಡಬೇಕು.?!!!!!