Click here to Download MyLang App

ಅಮ್ಮ ನೀನಗಾಗಿ ನಾವು : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

ವಿಶ್ವ ಮಹಿಳಾ ದಿನದ ವಿಶೇಷ ಕಥೆ.....

 ಅಮ್ಮಾ..........ಅಮ್ಮಾ.........ನಿನಗಾಗಿ ನಾವು

       ಅತ್ತೆ ನಾಳೆ ಶನಿವಾರ ಅಲ್ವಾ ಅತ್ತೇ........ಎಂದು ಹಿರಿಯ ಸೊಸೆ ಸೋನಿಯಾ ತನ್ನ ಐಶ್ವರ್ಯ ರೈ ಥರದ ಸೊಂಟ ಬಳುಕಿಸುತ್ತಾ.......ರಾಗವಾಡಿದಳು, ಹೌದಮ್ಮಾ.....ಏನಿವಾಗ.........ಏಕೆ........ಶನಿವಾರ ಏನಾದರೂ.........ಬದಲಾಗುತ್ತದೆಯಾ.....ಅಥವಾ ನನಗೇನಾದರೂ ನೆನಪಿನ ಶಕ್ತಿ ಕುಂದಿದೆ ಎಂದು ಪರೀಕ್ಷೆ ಮಾಡ್ತಾ ಇದ್ದೀಯಾ.......ಎಂದು ಸ್ವಲ್ಪ ಖಾರವಾಗಿಯೇ ಠಕ್ಕರ್ ಕೊಟ್ಟು,  ಏಕೆ.....ಎಲ್ಲರೂ..... ಎಲ್ಲಾದ್ರೂ.........ಹೊರಗೆ........ಎಂದು ಅತ್ತೆ ಜಾನಕಮ್ಮನವರೂ ಸಹ ಕೊಂಕಿನಿಂದಲೇ ಪ್ರತಿ ರಾಗವಾಡಿದರು.

      ಅಷ್ಟರಲ್ಲಿ ಅಲ್ಲಿಗೆ ಬಂದ ಕಿರಿಯ ಸೊಸೆ ಸೌಂದರ್ಯ.  ಅವಳೂ ತನ್ನ ಶಿಲ್ಪಾ ಶೆಟ್ಟಿಯ ಥರದ  ಸೊಂಟ ಮತ್ತಷ್ಟು ಬಳ್ಳಿಯಂತೆ ಬಳುಕಿಸುತ್ತಾ ಹೌದಕ್ಕಾ......ನಾಳೆ ಶನಿವಾರವೇ....... ಎಂದು ಹಿರಿಯ

 ಸೊಸೆಯ  ಧ್ವನಿಗೆ ಧ್ವನಿ ಸೇರಿಸಿದಳು.

ಓಹೋ......ನನಗೆ ನೆನಪಿಲ್ಲ......ಪಾಪ.....ನೀನೂ  ಜ್ಞಾಪಿಸುತ್ತಿರುವೆ.....ಹೌದಲ್ವಾ.....ನಾಳೆ ಶನಿವಾರವೇ....ಎಂದು ಕಿರಿಯ ಸೊಸೆ ಸೌಂದರ್ಯಳಿಗೂ ಬ್ಯಾಡಗಿ ಮೆಣಸಿನಕಾಯಿಂತೆ ಖಾರವಾಗಿಯೇ ಹೇಳಿ ತಮ್ಮ ಅಡುಗೆ ಕೆಲಸದಲ್ಲಿ ತೊಡಗಿಕೊಂಡರು.

     ಮತ್ತೆ ಸೌಂದರ್ಯಳೇ ಮಾತು ಮುಂದುವರೆಸಿದಳು.

ಅತ್ತೇ.......ತುಂಬಾ ದಿನಗಳಾಯಿತು ಹೊರಗೆ ಎಲ್ಲರೂ ಹೋಗಿ ಬರೋಣ್ವಾ........ಅಂತ, ಇನ್ನು ನೀವಂತೂ ಈ ಅಡುಗೆ ಮನೆ ಬಿಟ್ಟು ಹೊರಗೆ ಎಲ್ಲೂ ಬರೋಲ್ಲ...... ಬೇಕಿದ್ರೆ ನೀವೇ ಹೋಗಿ ಬನ್ನಿ......ಅಂತ ಹೇಳ್ತೀರಾ...... ಅದಕ್ಕೇ......ಅದಕ್ಕೇ......ಎಂದು ಇವಳು ರಾಗವಾಡುತ್ತಾ ಮೈಯನ್ನು ಮತ್ತಷ್ಟು ಬಳುಕಿಸುತ್ತಾ ತನ್ನ ಅತ್ತೆಯವರನ್ನು ರೇಗಿಸುತ್ತಿದ್ದಾಗ.......

ಮತ್ತೆ ಈ ಸಂಭಾಷಣೆ ಕೇಳಿಸಿಕೊಂಡ ಜಾನಕಮ್ಮನವರ ದೊಡ್ಡ ಮಗ  ಜಾನಿ @ ಜನಾರ್ಧನ,

ಏನ್ರಮ್ಮಾ.....ಅದು ಏನಾದ್ರೂ ಎರಡು ದಿನ ಹೊರಗಡೆ ಹೋಗುವ ಪ್ಲಾನ್ ಏನಾದ್ರೂ ಇದೆಯಾ..... ಎನ್ನುವಷ್ಟರಲ್ಲಿ , ಜಾನಕಮ್ಮನವರು , ಹೌದಪ್ಪಾ, ಎಲ್ಲಾ ಈ ಮೊದಲೇ ಪ್ಲಾನ್ ಮಾಡಿಬಿಟ್ಟು ಇಲ್ಲಿ ಈಗ  ಕೀ

 ಕೊಟ್ಟ ಗೊಂಬೆಯಂತೆ ಬಂದಿರುವೆ........ನೀವೆಲ್ಲಾ...... ಹೋಗಿ ಎರಡು ದಿನವೇಕೆ.......ಇಡೀ ವಾರವೇ ಹೋಗಿ ಎಲ್ಲರೂ.....ನಾನೊಬ್ಬಳು ಇದ್ದೀನಲ್ವಾ......ಕತ್ತೆ ಥರಾ ದುಡಿಯಲು, ಎಂದಾದರೂ, ಎಲ್ಲಿಗಾದರೂ ಬರ್ತೀಯಾ....ಅಮ್ಮಾ...ಎಂದು ಒಬ್ಬರಾದರೂ ಕರೀತೀರಾ......ವಾರದ ಐದು ದಿನ ನಿಮ್ಮ ಗಳ ತಿಂಡಿ, ಊಟ, ನೋಡ್ಕೊಳ್ತೀನಿ, ವಾರದ ಕೊನೆಗೆ ಎರಡು ದಿನಗಳು ನನಗೂ ಹೇಳದೇ ಎಲ್ಲರೂ ಮೆಲ್ಲಗೆ ಆ ಊರು, ಈ ಊರು ಸುತ್ತೋದಕ್ಕೆ ಹೋಗ್ಬಿಡ್ತೀರಿ, ಇನ್ನು ಅವರಿದ್ದಾರೋ........ಆ ನಿಮ್ಮ ಅಪ್ಪ......ವಾರದ ಆರೂ  ದಿನ ಹೊರಗೆ ದುಡಿದು ಬಂದು ಭಾನುವಾರವೂ ಮನೆಯಲ್ಲಿ ಯಾರಾದರೊಬ್ಬ ಗೆಳೆಯ , ತಮ್ಮ, ಅಣ್ಣ, ಚಿಕ್ಕಪ್ಪ, ತಾತ......ಅವರು ಬರ್ತಾರೆ, ಇವರು ಬರ್ತಾರೆ.....ಅದು ಮಾಡು, ಇದು ಮಾಡು ಅಂತ ಹೆಚ್ಚು ಹೆಚ್ಚು ಅಡುಗೆ ಮನೆ ಕೆಲಸಗಳನ್ನು ನನಗೇ ಕೊಡ್ತಾರೆ, ನನ್ನನ್ನೇನು........

ಅಂದುಕೊಂಡಿದ್ದೀರಾ...... ನೀವೆಲ್ಲಾ........ಎಂದು ಕಣ್ಣಂಚಿನವರೆಗೂ ಬಂದ  ಕಣ್ಣೀರಿನ ಹನಿಗಳಿಗೆ ಅಲ್ಲೇ ತಡೆದು ನಿಲ್ಲಿಸಿ, ಯಥಾಪ್ರಕಾರ ಈರುಳ್ಳಿ ತರಲು ಉಗ್ರಾಣದಂತಿದ್ದ ಪಕ್ಕದ ಕೋಣೆಗೆ ಹೋದರು, ಅಷ್ಟರಲ್ಲಿ ಇದೆಲ್ಲವನ್ನೂ ಕೇಳಿಸಿಕೊಂಡ ಜಾನಕಮ್ಮನವರ ಕಿರಿಯ ಮಗ ಲೋಕಿ @ ಲೋಕೇಶ ಮತ್ತಷ್ಟು ಚೇಡಿಸಲೆಂಬಂತೆ ಹೌದಮ್ಮಾ......ನಾಳೆ, 

ನಾಡಿದ್ದು  ನಾವು ನಾಲ್ಕೂ ಜನ.......  ಎರಡೂ ಮಕ್ಕಳು ಜೊತೆಗೆ ಅಪ್ಪನೂ ಸೇರಿ ಅಜ್ಜೀ ಊರಿನ ತೋಟದ ಮನೆಗೆ ಕಾರಿನಲ್ಲಿ ಹೋಗ್ತಿದ್ದೀವಿ, ನಿನಗಂತೂ ಆ ಅಜ್ಜಿ ಮನೆ ಎಂದರೆ ಅಲರ್ಜಿ, ಅದಕ್ಕೇ ನೀನು ಇಲ್ಲೇ ಇರು, ಆದರೆ ನಮಗೆಲ್ಲಾ ಒಂದಿಷ್ಟು........ಕರಿದ........ತಿಂಡಿ........ ಏನಾದ್ರೂ........ಮಾಡಿಕೊಡ್ತೀಯ ತಾನೇ......ಎಂದು ಕೇಳಿದ, ಇದುವರೆಗೂ  ತಮ್ಮ ಕೋಣೆಯಲ್ಲಿ ಕಾಫಿ ಹೀರುತ್ತಾ ದಿನಪತ್ರಿಕೆ ಕೈಲಿಡಿದು ಒಂದಕ್ಷರವನ್ನೂ ಬಿಡದಂತೆ ಓದುತ್ತಿದ್ದ ಜಾನಕಮ್ಮನವರ ಪತಿ ಶ್ರೀರಾಮಚಂದ್ರಯ್ಯನವರು ಒಳಗಿನಿಂದಲೇ ಜೋರಾಗಿ ಜಾನೂ......ಜಾನೂ.....ಎಂದು ಏನನ್ನೋ ಕೇಳುವವರಂತೆ  ನಟಿಸುತ್ತಾ ಬಂದರು.

        ಇವರ ಈ ಕೂಗಿಗೆ ಉತ್ತರ ಕೊಡುತ್ತಾ ಜಾನಕಮ್ಮನವರು ಸರಿ, ಸರಿ, ಕಾಫಿ ಕೊಟ್ಟಿದ್ದೀನಲ್ಲಾ ಮತ್ತಿನ್ನೇನು.......ಜಾನೂ, ಜಾನೂ ಅಂತ ರಾಗ ನಿಮ್ಮದು,  ಇನ್ನು ನೀವೊಬ್ಬರೇ ಬಾಕಿ ಬನ್ನಿ....ನೀವೂ ಸೇರ್ಕೊಂಡ್ಬಿಟ್ರಾ......ಇವರ ಜೊತೆ......ಅದೆಲ್ಲಿಗೋ ಹೋಗ್ತೀರಂತೆ ......ಎಲ್ಲರೂ .... ಎರಡು ದಿನ......ನನಗೆ ತಿಳಿಯದಂತೆ,  ನಿಮ್ಮ ತಾಯಿ ಮನೆಗೆ........ತಾನೇ, ಹೋಗಿಬನ್ನಿ.....ಪಾಪ...ನಾನ್ಯಾಕೆ 

ನಿಮ್ಮತಾಯಿ, ನಿಮ್ಮಗಳ ಮಧ್ಯೆ.......ಜೊತೆಗೆ ಆ ಕಾತ್ಯಾಯಿನಿಯನ್ನೂ ಅವಳ ಗಂಡ ಜೊತೆಗೆ ಅವರ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಹೋಗ್ರಪ್ಪಾ...... ಯಾರು ಬೇಡ ಅಂತಾರೆ, ನಾನ್ಯಾರು, ಹೋಗೋರು ನೀವು, ಕರೆದಿರೋದು  ಅವರು, ಎಂದು ಖಾರವಾಗಿ ನುಡಿದರು ಉಗ್ರಾಣದಿಂದಲೇ ಜಾನಕಮ್ಮನವರು.

       ಅವರಿಗೂ ಗೊತ್ತು, ವಾರದ ಐದು ದಿನಗಳು ಕಛೇರಿಗಳಿಗೆ, ಅವರುಗಳು ಹೋಗುವುದಕ್ಕೆ ಮುಂಚೆಯೇ ಅವರವರ ತಿಂಡಿ, ಊಟ ತಯಾರು ಮಾಡಿ, ಅವರುಗಳು ಕೊಂಡುಹೋಗಲು ಟಿಫಿನ್ ಬಾಕ್ಸ್ ಗೆ ಹಾಕಿ ಅವರೆಲ್ಲರೂ ಹೋಗೋವರೆಗೂ ಒಬ್ಬಳೇ ಅಡುಗೆ ಮನೆಯಲ್ಲಿ ನಿಂತು ತಾನೊಬ್ಬಳೇ ಕಷ್ಟಪಡುತ್ತಿದ್ದರು ಜಾನಕಮ್ಮನವರು. ಅವರುಗಳು ಎಲ್ಲಾ ಹೋದ ನಂತರ ಒಂದರೆಕ್ಷಣ ವಿಶ್ರಾಂತಿ ಬಯಸದ ಜಾನಕಮ್ಮನವರು ಮತ್ತೆ ಅದೇ ಮನೆಯನ್ನೆಲ್ಲ ಗುಡಿಸಿ, ಸಾರಿಸಿ, ಮೊಮ್ಮಕ್ಕಳು ಆಟವಾಡಿ ಅಲ್ಲಲ್ಲೇ ಬಿಸಾಕಿದ್ದ ಆಟದ ಸಾಮಾನುಗಳನ್ನು ಒಂದೆಡೆ ಎತ್ತಿಟ್ಟು, ಸೇರದಿದ್ದರೂ ಒಂದಿಷ್ಟು ತಿಂಡಿ ತಿಂದು, ಬಟ್ಟೆಗಳನ್ನೆಲ್ಲಾ ವಾಷಿಂಗ್ ಮೆಷಿನ್ ಗೆ‌ ಹಾಕಿ, ನಂತರ ಸ್ನಾನ ಮುಗಿಸಿ, ಬಂದು ದೇವರ  ಪೂಜೆ ಮಾಡೋದೇ ಮದ್ಯಾಹ್ನ ಒಂದು

 ಗಂಟೆಗೆ, ಇನ್ನೆಲ್ಲಿಯ ಬಿಡುವು, ಟಿ.ವಿ. ನೋಡಲೂ ಆಗೊಲ್ಲ, ಮೊಬೈಲು.....ಅದೆಲ್ಲಿಯದು, ಅದಂತೂ ಕನಸಿನ ಮಾತೇ......ಈ ಕೆಲಸದ ಒತ್ತಡದಲ್ಲಿ.        

       ಅವರೆಲ್ಲಾ ದಿನದ ಎಂಟು ಗಂಟೆ ಕೆಲಸ ಮಾಡಿ, ಆರು, ಏಳು ಗಂಟೆಗೆಲ್ಲಾ ಒಬ್ಬೊಬ್ಬರೇ ಬರ್ತಾರೆ, ಅವರುಗಳು ಕಾಫಿ, ಟೀ, ಕುರುಕಲು ತಿಂಡಿ ಏನಾದ್ರೂ ಕೇಳ್ತಾರೆ.......ಹೋಗಲಿ ಬಿಡಿ...... ಅದಕ್ಕೂ ಮುಂಚೆ ಮೊಮ್ಮಕ್ಕಳು ಆಟೋದಲ್ಲಿ ಇನ್ನೇನು ಬಂದುಬಿಡುತ್ತಾರೆ, ಅವರು ಬರೋದ್ರಲ್ಲಿ ಬಿಸಿ ಬಿಸಿ ಅಡುಗೆ ಏನಾದ್ರೂ ಹೊಸರುಚಿ ಮಾಡಬೇಕು, ಇಲ್ಲಾಂದ್ರೆ ಅದೇ ಇದೆಯಲ್ಲಾ ಮ್ಯಾಗಿ ನೂಡಲ್ಸ್, ಪಿಜ್ಜಾ ಬರ್ಗರ್ ಅದೂ ಇದೂಂತ ಅವರ ತಂದೆಯರಿಗೆ ಹೇಳಿ ತರಿಸಿ ತಿಂದು ಹೊಟ್ಟೆ ಕೆಡಿಸಿಕೊಳ್ತಾರೆ, ಪಾಪ......ಅದಕ್ಕೇ ಮೊದಲೇ ಏನಾದ್ರೂ ಹೊಸ ತಿಂಡಿ ಮಾಡಿಡಬೇಕು, ಮೊಮ್ಮಕ್ಕಳು ಅಲ್ವಾ......ಸರಿ ಇನ್ನೆಲ್ಲಿ ನನಗೆ ವಿಶ್ರಾಂತಿ, ಈಗ ವಯಸ್ಸು ಐವತ್ತೈದು ಆದರೂ ಇನ್ನೂ ಚಾಕರಿ ಮಾಡ್ತಾನೇ ಇದ್ದೀನಿ, ಇನ್ನು ಊಟದ ಸಮಯ , ಬಿಸಿ ಬಿಸಿ ಮಾಡಿ ಊಟ ಮಾಡೋಣವೆಂದರೆ ನನಗೊಬ್ಬಳಿಗೇ ಅಂತ ಎಷ್ಟು ಮಾಡಿ ತಿನ್ನೋದು, ಸಂಜೆಗೆ ಮಾಡಿದರೆ ಎಲ್ಲರೂ ಬಂದು ಬಿಸಿ ಊಟ ಮಾಡ್ತಾರೆ, ಪಾಪ ಮಕ್ಕಳು,

 ಸೊಸೆಯಂದಿರಲ್ವಾ......ಅದಕ್ಕೇ ಊಟದ ಸಮಯಕ್ಕೆ ಉಳಿದ ತಿಂಡಿ ಏನಾದರೂ ಮಿಕ್ಕಿದ್ದರೆ.......ಅದನ್ನೇ ತಿಂದ್ಕೊಳೋದು.

      ಇಷ್ಟೆಲ್ಲಾ ಒಂದು ನಿಮಿಷ ವಿಶ್ರಾಂತಿ ಇಲ್ಲದೆ ಕೆಲಸಗಳನ್ನು ಬೆಳಿಗ್ಗೆ ಐದರಿಂದ ರಾತ್ರಿ ಹತ್ತರವರೆಗೂ ಮಾಡ್ತಾನೇ ಇರ್ತೀನಿ, ನನಗೋ ಹೊರಗೆ ಎಲ್ಲಾದರೂ ಹೋದರೆ ತಲೆ ನೋವು, ಆಯಾಸ ವಿಪರೀತ, ದೂರದ ಪ್ರಯಾಣ ವೆಂದರೆ.......ವಾಂತಿ , ಮೈಕೈ ನೋವು ಬಂದುಬಿಡುತ್ತೆ ,  ಮತ್ತೆ ಆಸ್ಪತ್ರೆಯಲ್ಲಿ ಒಂದು ವಾರ ಅಡ್ಮಿಟ್ ಆಗಿ ಅನುಭವಿಸೋದೇಕೆ ಎಂದು ಮನೆಯಲ್ಲಿಯೇ ಇರೋದು.....ಆರಾಮ ಅನಿಸುತ್ತದೆ.   ಅದಕ್ಕೇ ನಾನು ಎಲ್ಲಿಯೂ ಹೋಗೋಲ್ಲ, ಅದನ್ನೇ ನೆಪ ಮಾಡಿಕೊಂಡು ನನ್ನನ್ನು ಇಲ್ಲಿ ಬಿಟ್ಟು ಎಲ್ಲರೂ ಕಾರಿನಲ್ಲಿ ಎರಡು ದಿನ ಅಜ್ಜಿ ಮನೆಗೆ ಅಂತ ಹೊರಟು ಕುಳಿತಿದ್ದಾರೆ.........ಇನ್ನು ಆ ಅತ್ತೆನೋ...... ನನ್ನನ್ನು ಕಂಡರೆ ಉರಿದು ಬೀಳ್ತಾರೆ, ಮೊದಲಿನಿಂದಲೂ, ಅದೇನು ದ್ವೇಷವೋ, ಆ ಮುದುಕಿಗೆ, ನಾನು ಹೋಗದಿದ್ದರೇ ಅವರಿಗೆ ಸಮಾಧಾನ, ಇವರುಗಳೂ ಹಾಗೇ ಮಾಡ್ತಾರೆ, ಅದೇನೋ ಗಾದೆ ಇದೆಯಲ್ಲಾ......ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಅದನ್ನೇ.......ಎನ್ನುವಂತೆ.....ಎಲ್ಲಾ

 ನನ್ನ ಗ್ರಹಚಾರ.

      ಸರಿ ಎಲ್ಲರೂ ಹೋಗಿಬನ್ನಿ ಎಂದು ಹೇಳಿ ತಮ್ಮ ಕೆಲಸದಲ್ಲಿ ತಾವು ತಲ್ಲೀನರಾಗಿದ್ದರು ಜಾನಕಮ್ಮನವರು. ಆದರೂ ಅಷ್ಟೂ ಜನ ಅವರನ್ನು ಚೇಡಿಸುವುದೂ ಮುಂದುವರೆದಿತ್ತು, ಜಾನಕಮ್ಮನವರೂ ಹೊರಗೆ ತೋರಿಸಿಕೊಳ್ಳದಿದ್ದರೂ, ಅಳು ಬಂದರೂ ಒಳಗೇ ಅದುಮಿಟ್ಟುಕೊಂಡು ಹೊರಗೆ ನಟನೆ ಮಾಡುತ್ತಾ ಇರಬೇಕಾದರೆ ಜಾನಕಮ್ಮನವರ ಮೊಬೈಲ್ ಗೆ ಅವರ ಮಗಳು ಕಾತ್ಯಾಯಿನಿ ಕರೆ ಮಾಡುತ್ತಾಳೆ.

     ಅವರ ಕಿರಿಯ ಮಗ ಲೋಕಿ.... ಅಮ್ಮ......ಅಮ್ಮ

ಅಕ್ಕ ಕಾತ್ಯಾಯಿನಿ ಫೋನು..... ಎಂದು ಅಮ್ಮನ ಕೈಗೆ‌ ಫೋನು ಕೊಟ್ಟು,  ಎಲ್ಲರೂ ಮುಸಿ ಮುಸಿ ನಗುತ್ತಿರಬೇಕಾದರೆ....... ಜಾನಕಮ್ಮನವರು ಫೋನಿನಲ್ಲಿ ಮಾತನಾಡಲು ಮತ್ತೆ ಉಗ್ರಾಣದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ತಾರೆ.

 

     ಹಾಗೆ ಹೋಗಿ ಹೀಗೆ ಬಂದ ಜಾನಕಮ್ಮನವರು ಫೋನನ್ನು ಅಲ್ಲೇ ಮಂಚದ ಮೇಲೆ ಎಸೆದು ಕೋಪದಿಂದ ಇವಳೊಬ್ಬಳು ಬಾಕಿ ಇದ್ದಳು,  ಇವರ

 ಜೊತೆ ಸೇರಿಕೊಂಡು ಇವಳು ಸಹ ಏನೇನೋ ಮಸಲತ್ತು ಮಾಡಿದ್ದಾಳೆ,.........ಎಂದು ಮಗಳು ಕಾತ್ಯಾಯಿನಿಯನ್ನು ಮನದಲ್ಲೇ ಶಪಿಸುತ್ತಾ ಮತ್ತೆ ಈರುಳ್ಳಿ ಕತ್ತರಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು.

ಆಗ ಎಲ್ಲರೂ ಏನಮ್ಮಾ, ಕಾತ್ಯಾಯಿನಿ ಏನೇಳಿದಳು ಎಂದು ಚೇಡಿಸುತ್ತಲೇ  ಕೇಳಿದರು ಮಕ್ಕಳು, ಹೊಗ್ರೋ.......ಅವಳು, ನೀವೆಲ್ಲಾ ಸೇರಿ ಏನ್ ಮಾಡ್ತಾ ಇದ್ದೀರಾ ಅನ್ನೋದು ತಿಳಿಯಿತು, ಎಂದು, ಕೂಗಾಡಿದರು, ಇದೇ ಒತ್ತಡದಲ್ಲಿ ಇದ್ದ ಜಾನಕಮ್ಮನವರು ಚಾಕುವಿನಿಂದ ಕೈ ಬೆರಳು ಕತ್ತರಿಸಿಕೊಂಡು ಅಮ್ಮಾ..... ಎಂದು ಕೂಗುತ್ತಾ, ಬೆರಳನ್ನು ಬಾಯಿಗೆ ಇಟ್ಟುಕೊಂಡ ಅವರು ಇವರನ್ನೆಲ್ಲಾ ಗಮನಿಸಿ....ಏನೋ ನಡೆಸ್ತಿದ್ದಾರೆ, ಅದೇನು ಬೈಕೊಂಡರೋ ಏನೋ, ಇವರೆಲ್ಲಾ ಎಂದು ಮನದಲ್ಲೇ ಯೋಚಿಸಿ, ಕೈ ಬೆರಳಿನ ನೋವಿನ ನೆಪ ಹೇಳಿ, ಜೊತೆಗೆ ಇವರೆಲ್ಲರ ಮಾತುಗಳಿಂದ ಕೋಪಗೊಂಡು  ಕೋಣೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಮಲಗಿದರು.

     ಅಷ್ಟರಲ್ಲಿ ಅವರ ಮಕ್ಕಳು, ಸೊಸೆಯಂದಿರು,  ಎಲ್ಲಾ ಸೇರಿ ಮಾತನಾಡಿಕೊಂಡು ಅಂದಿನ  ರುಚಿಕಟ್ಟಾದ ಅಡುಗೆ ಮಾಡಿದರು, ಇನ್ನು ಊಟದ ಸಮಯ, ರಾತ್ರಿ ಎಂಟು ಗಂಟೆ, ಬಿಸಿ ಬಿಸಿ ಊಟ

 ತಯಾರಾಗಿದೆ, ಪ್ರತೀದಿನ ರಾತ್ರಿಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಅವರ ಮನೆಯ ವಾಡಿಕೆ, ಅದರಂತೆ ಮೊಮ್ಮಕ್ಕಳನ್ನು ಕಳಿಸಿದರು, ಅವರುಗಳು ಹೋಗಿ.....ಅಜ್ಜಿ....ಅಜ್ಜೀ....ಎದ್ದೇಳು ಎಂದು ಎಬ್ಬಿಸಿ ಜಾನಕಮ್ಮನವರನ್ನು ಕರೆಯಲು ಹೋದರೆ........ಗಳ ಗಳ ಅಂತ ಅಳು ಮಾತ್ರ ಕೇಳುತ್ತಿದೆ, ನಿಜವಾಗಿಯೂ ಅಜ್ಜಿ ಕಣ್ಣಲ್ಲಿ ನೀರು ಧಾರಾಕಾರವಾಗಿ ಬರುತ್ತಿದೆ ಎಂದು ಹೇಳಿದರು, ಮೊಮ್ಮಕ್ಕಳು.

ಅವರ ಹೆಣ್ಣು ಹೃದಯ ❤️ ಖಂಡಿತವಾಗಿಯೂ ನೊಂದಿದೆ,  ಎಂದು ಎಲ್ಲರೂ ಅರಿತು......ಇನ್ನು ಅಮ್ಮನನ್ನು ಅಳಿಸಬಾರದು ಎಂದರಿತರು ಎಲ್ಲರೂ .

       ಆಗ ಜಾನಕಮ್ಮನವರ ಪತಿ ಶ್ರೀರಾಮಚಂದ್ರಯ್ಯನವರು ಮೊದಲು  ಸಮಾಧಾನ ಮಾಡಲು ಹೋದರು, , ಖಂಡಿತವಾಗಿಯೂ ಜಾನಕಮ್ಮನವರು ದುಃಖಿತರಾಗಿದ್ದರು, ಅವರ ಹಿಂದೆಯೇ ಎಲ್ಲರೂ ಬಂದು ಜಾನಕಮ್ಮನವರನ್ನು ಸುತ್ತುವರೆದು ಸಮಾಧಾನಪಡಿಸಲು ಪ್ರಯತ್ನಪಟ್ಟರೂ ಅವರ ಕೋಪ ಮಾತ್ರ ಕಡಿಮೆಯಾಗಲಿಲ್ಲ, ಆಗ ಹಿರಿಯ ಸೊಸೆ ಸೋನಿಯಾ ಹಾಗೂ ಕಿರಿಯ ಸೊಸೆ ಸೌಂದರ್ಯ ಇಬ್ಬರೂ ತಮ್ಮ ಅತ್ತೆಯನ್ನು

 ತಬ್ಬಿಕೊಂಡು ಅತ್ತೆ ನಮ್ಮದು ತಪ್ಪಾಯಿತು, ನಿಮ್ಮನ್ನು ಬೇಕೆಂತಲೇ ರೇಗಿಸಿದ್ದು, ನಾಳೆ ಏನು ವಿಶೇಷ ಹೇಳಿ...

ಎಂದು ಕೇಳಿದರು ಆಗ ಜಾನಕಮ್ಮನವರು , ನಾಳೆ....ಇನ್ನೇನು ಶನಿವಾರ ತಾನೆ....ಎಂದು ಕೇಳಿದರು.

ಶನಿವಾರ ಸರಿ.......ಆದರೆ......ನಾಳೆ....... ನಾವುಗಳೆಲ್ಲಾ ಸೇರಿ

ವಿಶ್ವ ಮಹಿಳಾ ದಿನವನ್ನು ನಾಳೆ ಆಚರಿಸ್ತೇವೆ...... ನಮಗೆಲ್ಲರಿಗೂ ರಜೆ ಇರುವ ಕಾರಣ. ಎಂದು ಇಬ್ಬರೂ ಸೊಸೆಯರು ಜೊತೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಮೇತ ಶ್ರೀ ರಾಮಚಂದ್ರಯ್ಯ ನವರು ಒಕ್ಕೋರಲಿನಿಂದ ಹೇಳಿದರು. ಹಾಗೆಂದರೇನು.....ಎಂದು ಕೇಳಿದರು ಜಾನಕಮ್ಮನವರು ತುಸು ಮುನಿಸಿನಿಂದಲೇ, ಅಂದರೆ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ

ನಿಮ್ಮ ಸಲುವಾಗಿ ಇದೇ ಮನೆಯಲ್ಲಿ ನಿಮಗೋಸ್ಕರವೇ ಆಚರಣೆ ಮಾಡ್ತೀವಿ,

ಅದರಿಂದ ನನಗೇನು ಪ್ರಯೋಜನ,ಅದೇ ಗಾದೆ ಇದೆಯಲ್ಲಾ....... "ಯಾವುದೇ ಸರ್ಕಾರ ಬಂದರೂ ನಾವು ರಾಗಿ ಬೀಸೋದು ತಪ್ಪಲ್ಲ" ಅನ್ನುವಂತೆ ಏನೇ ಆದರೂ ನಾನೇ ಅಡುಗೆ ಮನೆಯಲ್ಲಿ ಕಷ್ಟ ಪಡಬೇಕು.

 ಎಂದು ಮತ್ತೆ ಮುನಿಸಿನಿಂದಲೇ.

     ಆಗ ಮತ್ತೆ ಎಲ್ಲರೂ ಜಾನಕಮ್ಮನವರಿಗೆ ಸ್ವಲ್ಪ ಅರ್ಥವಾಗುವಂತೆ ಹೇಳಿದರು, ಆದರೆ ಇಂದಿನಿಂದ ಪ್ರತೀ ಶನಿವಾರ ಭಾನುವಾರಗಳಂದು ಅಮ್ಮನಿಗೆ ಎಲ್ಲಾ ರೀತಿಯ ಕೆಲಸಗಳಿಂದ ವಿರಾಮ, ಇನ್ನು ನಾವೆಲ್ಲಾ ಸೇರಿ ವಾರದ ಕೊನೆ ಎರಡು ದಿನ ಇಡೀ ಮನೆಯ ಕೆಲಸಗಳನ್ನು ಮಾಡ್ತೀವಿ, ನಿಮಗೆ ಆ ಎರಡೂ ದಿನ ವಿಶ್ರಾಂತಿ, ನೀವು ಯಾವುದೇ ಕೆಲಸ ಮಾಡಬಾರದು ತಿಳಿಯಿತಾ.........ಎಂದು ಎಲ್ಲರೂ ಅಮ್ಮ ಒಪ್ಪಿಕೊಳ್ಳುವವರೆಗೂ ಬಿಡದೆ ಅವರೂ ಒಪ್ಪಿಕೊಂಡರು, ಎಲ್ಲರೂ ಅವರನ್ನು ಅಪ್ಪಿಕೊಂಡು ಮುದ್ದಾಡಿದರು. ಆಗ ಅವರ ಮುಖ ನಾಚಿ ನೀರಾಯಿತು. ಆಗ ಹೋಗ್ರೀ ......ನನ್ನನ್ನು ಬಕ್ರಾ ಮಾಡಿ ನೀವುಗಳೆಲ್ಲಾ ತಮಾಷೆ ನೋಡ್ತೀರಾ...... ಎಂದು ನಾಚಿಕೆಯಿಂದ ತಲೆ ತಗ್ಗಿಸಿ ಹೇಳಿದರು.

     ಹೌದಮ್ಮಾ....ನೀನು ಹೇಗೆ ಕೋಪ ಮಾಡ್ಕೋತೀಯಾ ನೋಡೋಣ ಎಂದು ನಾವೆಲ್ಲರೂ ನಿನ್ನನ್ನು ಚೇಡಿಸಿದ್ದು,  ನಮ್ಮನ್ನು ಕ್ಷಮಿಸಿ, ಈಗ ನಾವು ಹೇಳ್ತಿರೋದೆಲ್ಲಾ ಸತ್ಯ, ನೀನು ಇಡೀ ವಾರ ನಮಗಾಗಿ ಅದೆಷ್ಟು ಅಕ್ಕರೆಯಿಂದ ನಾವು ಕೇಳಿದ್ದನ್ನೆಲ್ಲಾ ಮಾಡಿ ಕೊಡ್ತೀಯ, ನಮ್ಮ ಮಕ್ಕಳನ್ನು ಸಹ ಅದೆಷ್ಟು

 ಪ್ರೀತಿಯಿಂದ ನೋಡ್ಕೋತೀಯಾ, ನಮಗೋ ವಾರಕ್ಕೆ ಎರಡು ದಿನ ರಜೆ ಇರುತ್ತದೆ....... ಆದರೆ ನಿನಗೆ ಇಡೀ ಜೀವನದಲ್ಲಿ ಒಮ್ಮೆಯಾದರೂ, ಒಂದು ದಿನವಾದರೂ ರಜೇ ಇಲ್ಲ, ನೀನೂ ಕೇಳೊಲ್ಲ, ನಾವುಗಳೂ ಇನ್ನುಮೇಲೆ ಈ ಶನಿವಾರದಿಂದ ಮತ್ತೆಂದೂ ಹೊರಗೆ ಹೋಗೊಲ್ಲಾ......ಯಾವ ಅಜ್ಜಿ ಮನೆಗೂ ಹೋಗೋಲ್ಲ,  ಯಾವುದೇ ಪ್ರವಾಸಕ್ಕೂ ಹೋಗೋಲ್ಲ, ಹೋಗುವುರಾದರೆ ನಿನ್ನ ಜೊತೆಗೆ ಮಾತ್ರ, ಇಂದಿನಿಂದ ಎಲ್ಲರೂ ಸೇರಿಕೊಂಡು ವಾರದ ಕೊನೆಯ ಎರಡು ದಿನ ನಿನಗಾಗಿ ಇಡೀ ಮನೆಯ ಉಸ್ತುವಾರಿ ನೋಡಿಕೊಂಡು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ನಿಶ್ಚಯಿಸಿರುವೆವು.

 ಹೌದು ಕಣೇ..... ಮಾರಾಯ್ತಿ ಮಕ್ಕಳು ಹೇಳ್ತಿರೋದೆಲ್ಲಾ ನಿಜ ನಿನಗೂ ಇನ್ನು ವಾರಕ್ಕೆ ಐದೇದಿನ ಕೆಲಸ ಏನಂತೀಯಾ......

ಎಂದು ತನ್ನ ಧರ್ಮಪತ್ನಿಯನ್ನು ಉಧ್ದೇಶಿಸಿ ಹೇಳಿದರು, ಶ್ರೀರಾಮಚಂದ್ರಯ್ಯ ನವರು.

       ಅಷ್ಟರಲ್ಲಿ ಮತ್ತೆ ಜಾನಕಮ್ಮನವರ ಮಗಳು ಕಾತ್ಯಾಯಿನಿಯ ಫೋನು ಅರಚಿಕೊಂಡಿತು, ಆಗ ಮತ್ತೆ ಮೊಮ್ಮಕ್ಕಳೇ ಮೊಬೈಲ್ ತಂದು ಅಜ್ಜಿ ಕೈಗೆ

 ಕೊಡುತ್ತಾ.....ಅಜ್ಜಿ....ಅಜ್ಜಿ.....ಅತ್ತೆಯ ಕರೆ ಎಂದರು, ಜಾನಕಮ್ಮನವರು ಮಾತನಾಡುವುದಕ್ಕೆ ಮುಂಚೆಯೇ ಅಮ್ಮಾ......ಕ್ಷಮಿಸು, ನಾವು ಇದುವರೆಗೂ ಮಾಡಿದ್ದು ಕೇವಲ ತಮಾಷೆಗಾಗಿ, ನಾವುಗಳೆಲ್ಲಾ ಸೇರಿ ನಿನ್ನೊಬ್ಬಳನ್ನೇ ಬಿಟ್ಟು ಎಲ್ಲಿಗೂ ಪ್ರವಾಸ ಅಂತ ಏನೂ ಹೋಗೋಲ್ಲ, ನಾಳೆ ನಾವೂ ಸಹ ತವರು ಮನೆಗೆ ಬರ್ತೀವಿ, ನಿನಗೆ ಎರಡು ದಿನ ವಿಶ್ರಾಂತಿ ಕೊಟ್ಟು ಎಲ್ಲರೂ ಸೇರಿ ನಿನಗಾಗಿ

ವಿಶ್ವ ಮಹಿಳಾ ದಿನಾಚರಣೆ

ಮಾಡ್ತೀವಿ.   ಎಂದಾಗ ಮದುವೆಯಲ್ಲಿ ನವ ವಧುವಿನ ಮುಖದಂತೆ ನಾಚಿ ನೀರಾಯಿತು ಜಾನಕಮ್ಮನವರ ಮುಖ.

 ನೀತಿ: ದಿನದ ಇಪ್ಪತ್ನಾಲ್ಕು ಗಂಟೆಗಳು, ವಾರದ ಏಳೂ ದಿನಗಳು ನಿರಂತರ ವಿಶ್ರಾಂತಿ ಪಡೆಯದ ಜೀವ ಎಂದರೆ....... ಅದು ಹೆಣ್ಣು , ಮಹಿಳೆ,

ಅವರಿಗಾಗಿ ವಾರದ ಕೊನೆಯ ಒಂದು ದಿನ ವಿಶ್ರಾಂತಿ ಕೊಟ್ಟರೆ ......ನೋಡಿ....... ಆಗ ಅವರ ದೈನಂದಿನ ಲವಲವಿಕೆ ಹೇಗಿರುತ್ತದೆ ಎಂದು.

 

     ಹೊರಗೆ ದುಡಿಯುವ ಮಹಿಳೆಗೆ ವಾರದ ಕೊನೆಯ

 

ಒಂದು ಅಥವಾ ಎರಡು ದಿನ ವಿಶ್ರಾಂತಿ ಬೇಕೆಂದಾದರೆ....... ಮನೆಯಲ್ಲಿಯೇ ದುಡಿಯುವ ಮಹಿಳೆಗೆ ಏಕಿಲ್ಲ ವಿಶ್ರಾಂತಿ.

ವಿಶ್ವ ಮಹಿಳಾ ದಿನದ ವಿಶೇಷ ಕಥೆ

 

 

-ರಾಜೇಂದ್ರ ಕುಮಾರ್ ಗುಬ್ಬಿ

ಕನಸುಗಳ ಕಥೆಗಾರ